ಮುಲ್ಲನಪುರ (ಪಂಜಾಬ್): ಉದಯೋನ್ಮುಖ ಆರಂಭ ಆಟಗಾರ ಪ್ರಿಯಾಂಶ್ ಆರ್ಯ (103;42ಎ) ಅವರ ಅಮೋಘ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ಮಂಗಳವಾರ ನಡೆದ ಇನ್ನೊಂದು ಹೋರಾಟದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 18 ರನ್‌ಗಳಿಂದ ಸೋಲಿಸಿತು.
ಈ ಪಂದ್ಯದಲ್ಲೂ ಎರಡೂ ತಂಡಗಳು 200ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದವು. ಮೊದಲು ಬ್ಯಾಟಿಂಗಿಗೆ ಇಳಿದ ಪಂಜಾಬ್ ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 219 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಒಂದು ಹಂತದಲ್ಲಿ ಕುಸಿತದತ್ತ ಸಾಗಿದ್ದ ತಂಡಕ್ಕೆ ಪ್ರಿಯಾಂಶ್ ಶತಕದ ಮೂಲಕ ಆಸರೆಯಾದರು. ಕೊನೆಯಲ್ಲಿ ಶಶಾಂಕ್ ಸಿಂಗ್ (ಔಟಾಗದೇ 52, 36 ಎಸೆತ) ಮತ್ತು ಮಾರ್ಕೊ ಯಾನ್ಸೆನ್ (ಔಟಾಗದೇ 34, 19ಎ) ಅವರ ಆಟದಿಂದ ತಂಡ ಉತ್ತಮ ಮೊತ್ತ ಕಲೆಹಾಕಿತು.
ಉತ್ತರವಾಗಿ ಚೆನ್ನೈ ತಂಡ ತನ್ನ ಪಾಲಿನ ಓವರುಗಳಲ್ಲಿ 5 ವಿಕೆಟ್‌ಗೆ 201 ರನ್ ಗಳಿಸಿ ನಿರಾಸೆ ಅನುಭವಿಸಿತು. ಇದು ಋತುರಾಜ್ ಗಾಯಕವಾಡ ಪಡೆಗೆ ಐದು ಪಂದ್ಯಗಳಲ್ಲಿ ಸತತ ನಾಲ್ಕನೇ ಸೋಲು.
ರಚಿನ್ ರವೀಂದ್ರ ಮತ್ತು ಡೆವಾನ್ ಕಾನ್ವೆ (69, 49ಎ) ಮೊದಲ ವಿಕೆಟ್‌ಗೆ 6.3 ಓವರುಗಳಲ್ಲಿ 61 ರನ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ನಂತರ ಶಿವಂ ದುಬೆ (42, 27ಎ) ಮತ್ತು ಐದನೇ ಕ್ರಮಾಂಕದಲ್ಲಿ ಆಡಿದ ಧೋನಿ (27, 12ಎ) ಸ್ವಲ್ಪ ಪ್ರತಿರೋಧ ತೋರಿದರೂ, ಗುರಿ ಸಾಕಷ್ಟು ದೂರವಿತ್ತು.
ಮಿಂಚಿದ ಪ್ರಿಯಾಂಶ್: ದೆಹಲಿ ಲೀಗ್‌ನಲ್ಲಿ ಮಿಂಚಿದ್ದ 24 ವರ್ಷ ವಯಸ್ಸಿನ ಪ್ರಿಯಾಂಶ್, ಈ ಪಂದ್ಯದಲ್ಲಿ ಒಂಬತ್ತು ಭರ್ಜರಿ ಸಿಕ್ಸರ್ ಮತ್ತು ಏಳು ಬೌಂಡರಿಗಳನ್ನು ಸಿಡಿಸಿದರು. ಒಂದು ಹಂತದಲ್ಲಿ 83 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿದ್ದ ತಂಡಕ್ಕೆ ‘ಇಂಪ್ಯಾಕ್ಟ್ ಆಟಗಾರ’ನಾಗಿ ಕಣಕ್ಕಿಳಿದು ಆಸರೆಯಾದರು.
ಪ್ರಿಯಾಂಶ್ ಮತ್ತು ಶಶಾಂಕ್ ಸಿಂಗ್ (ಔಟಾಗದೇ 52;36ಎ, 4x2, 6x3) ಆರನೇ ವಿಕೆಟ್ ಜೊತೆಯಾಟದಲ್ಲಿ 71 (34ಎ) ರನ್ ಸೇರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. 13ನೇ ಓವರ್‌ನಲ್ಲಿ ಬೌಂಡರಿಯೊಂದಿಗೆ ಪ್ರಿಯಾಂಶ್ ಐಪಿಎಲ್‌ನಲ್ಲಿ ಚೊಚ್ಚಲ ಶತಕವನ್ನು ಪೂರೈಸಿದರು.
ಸಂಕ್ಷಿಪ್ತ ಸ್ಕೋರು: ಪಂಜಾಬ್ ಕಿಂಗ್ಸ್: 20 ಓವರ್‌ಗಳಲ್ಲಿ 6ಕ್ಕೆ 219 (ಪ್ರಿಯಾಂಶ್ ಆರ್ಯ 103, ಶಶಾಂಕ್ ಸಿಂಗ್ ಔಟಾಗದೇ 52, ಮಾರ್ಕೊ ಯಾನ್ಸೆನ್ ಔಟಾಗದೇ 34; ಖಲೀಲ್ ಅಹಮ್ಮದ್ 45ಕ್ಕೆ 2, ರವಿಚಂದ್ರನ್ ಅಶ್ವಿನ್ 48ಕ್ಕೆ 2); ಚೆನ್ನೈ ಸೂಪರ್ ಕಿಂಗ್ಸ್: 20 ಓವರುಗಳಲ್ಲಿ 5 ವಿಕೆಟ್‌ಗೆ 201 (ರಚಿನ್ ರವೀಂದ್ರ 36, ಡೆವಾನ್ ಕಾನ್ವೆ 69, ಶಿವಂ ದುಬೆ 42, ಎಂ.ಎಸ್.ಧೋನಿ 27; ಲಾಕಿ ಫರ್ಗ್ಯೂಸನ್ 40ಕ್ಕೆ2); ಪಂದ್ಯದ ಆಟಗಾರ: ಪ್ರಿಯಾಂಶ್ ಆರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.