ಜೈಪುರ: ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಪಂಜಾಬ್‌ಗೆ 185 ರನ್‌ಗಳ ಗುರಿ ನೀಡಿದೆ.
ಅಬ್ಬರದ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ 39 ಎಸೆತಗಳಲ್ಲಿ 57 ರನ್ ಸಿಡಿಸುವ ಮೂಲಕ ತಂಡದ ಉತ್ತಮ ಮೊತ್ತಕ್ಕೆ ನೆರವಾದರು.
ಆರಂಭಿಕರಾದ ರ್‍ಯಾನ್ ರಿಕಲ್ಟನ್ 27, ರೋಹಿತ್ ಶರ್ಮಾ 24 ರನ್ ಸಿಡಿಸಿದರು. ಉಳಿದಂತೆ, ನಾಯಕ ಹಾರ್ದಿಕ್ ಪಾಂಡ್ಯ 26, ನಮನ್ ಧೀರ್ ಸ್ಫೋಟಕ 20 ರನ್ ಸಿಡಿಸಿದರು. ವಿಲ್ ಜ್ಯಾಕ್ಸ್ ಸಹ 17 ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು.
ಅಂತಿಮ ಓವರ್‌ನಲ್ಲಿ ರನ್ ವೇಗಕ್ಕೆ ಕಡಿವಾಣಕ್ಕೆ ಬಿದ್ದಿದ್ದರಿಂದ 20 ಓವರ್ ಅಂತ್ಯಕ್ಕೆ ಮುಂಬೈ 7 ವಿಕೆಟ್ ಕಳೆದುಕೊಂಡು 184 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್ ಪರ ವೇಗಿ ಅರ್ಷದೀಪ್ ಸಿಂಗ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಅತ್ಯುತ್ತಮ ಬೌಲರ್ ಎನಿಸಿದರು.
ಉಳಿದಂತೆ, ವೈಶಾಕ್ ವಿಜಯ್ ಕುಮಾರ್(44/2), ಮಾರ್ಕಸ್ ಜಾನ್‌ಸೇನ್(34/2) ಉತ್ತಮ ಸಾಥ್ ನೀಡಿದರು.
ಉಭಯ ತಂಡಗಳಿಗೂ ಇದು ಕೊನೆಯ ಲೀಗ್ ಪಂದ್ಯವಾಗಿದೆ. ಸದ್ಯ ಪಂಜಾಬ್ ತಂಡವು ಎರಡನೇ ಮತ್ತು ಮುಂಬೈ ನಾಲ್ಕನೇ ಸ್ಥಾನದಲ್ಲಿವೆ. ಪ್ಲೇ ಆಫ್ ಅರ್ಹತೆ ಖಚಿತಪಡಿಸಿಕೊಂಡಿವೆ. ಆದರೆ 17 ಅಂಕ ಹೊಂದಿರುವ ಪಂಜಾಬ್ ತಂಡವು ಮುಂಬೈ ವಿರುದ್ಧ ಸೋತರೆ ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಇದೆ. ಆಗ ತಂಡವು ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ. ಶನಿವಾರ ರಾತ್ರಿ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದರಿಂದ ಈ ರೀತಿಯ ಪರಿಸ್ಥಿತಿ ಬಂದಿದೆ. ಅಗ್ರ ಎರಡರಲ್ಲಿ ಸ್ಥಾನ ಪಡೆಯಬೇಕೆಂದರೆ ಮುಂಬೈ ಎದುರು ಪಂಜಾಬ್ ಜಯಿಸಲೇಬೇಕು.
16 ಅಂಕ ಗಳಿಸಿರುವ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ರನ್‌ರೇಟ್ ಹೊಂದಿದೆ. ಪಂಜಾಬ್ ಎದುರು ಜಯಿಸಿದರೆ, ಎರಡನೇ ಸ್ಥಾನಕ್ಕೇರಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕೊನೆಯ ಪಂದ್ಯ ಸೋತರೆ ಮುಂಬೈ ಅಗ್ರಸ್ಥಾನಕ್ಕೇರಲೂಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.