ADVERTISEMENT

PV Web Exclusive: ಅಪ್ಪನ ಕನಸೇ ಮಾರ್ಕಸ್‌ ಸ್ಟೋಯಿನಿಸ್ ಜೀವನ

ಗಿರೀಶದೊಡ್ಡಮನಿ
Published 10 ನವೆಂಬರ್ 2020, 15:09 IST
Last Updated 10 ನವೆಂಬರ್ 2020, 15:09 IST
ಮಾರ್ಕಸ್ ಸ್ಟೋಯಿನಿಸ್
ಮಾರ್ಕಸ್ ಸ್ಟೋಯಿನಿಸ್   

’ಇವತ್ತು ಅಪ್ಪ ಇದ್ದಿದ್ದರೆ ಅದೆಷ್ಟು ಖುಷಿ ಪಟ್ಟಿರೋರು..ಹೆಮ್ಮೆಯಿಂದ ಬೆನ್ನು ತಟ್ಟಿರೋರು..‘

ತಾವು ಪ್ರತಿನಿಧಿಸುವ ತಂಡವನ್ನು ’ಆಲ್‌ರೌಂಡ್‌‘ ಆಟದ ಮೂಲಕ ಗೆಲ್ಲಿಸುವಾಗಲೆಲ್ಲ ಮಾರ್ಕಸ್ ಸ್ಟೋಯಿನಿಸ್‌ ಹೇಳಿಕೊಳ್ಳುವ ಮಾತಿದು. ಮಾರ್ಕಸ್ ಇವತ್ತು ಒಳ್ಳೆಯ ಆಲ್‌ರೌಂಡರ್‌ ಆಗಿ ರೂಪುಗೊಂಡಿದ್ದರ ಹಿಂದೆ ಅಪ್ಪ ಕ್ರಿಸ್ ಶ್ರಮವಿದೆ. ಮಗ ಆಸ್ಟ್ರೇಲಿಯಾ ತಂಡದಲ್ಲಿ ಟೆಸ್ಟ್ ಕ್ರಿಕೆಟ್ ಆಡಬೇಕೆಂಬ ಕನಸು ಕಂಡವರು. ಆದರೆ, ಅದಕ್ಕೂ ಮುನ್ನವೇ ಅವರು ನಿಧನರಾಗಿದ್ದು, ಮಾರ್ಕಸ್ ಮನಸ್ಸಿನ ಮೇಲೆ ಮಾಡಿದ ಪರಿಣಾಮ ಸಣ್ಣದಲ್ಲ.

ಮೂರು ವರ್ಷಗಳ ಹಿಂದೆ ಅಪ್ಪ ತೀರಿಹೋದ ಸಂದರ್ಭದಲ್ಲಿ ಕುಟುಂಬದೊದಿಗೆ ನಿಲ್ಲಲು ಟೆಸ್ಟ್‌ ತಂಡದ ಆಯ್ಕೆಯಿಂದ ಹಿಂದೆ ಸರಿದರು. ಇಲ್ಲದಿದ್ದರೆ ಅವರು ಆ್ಯಷಸ್‌ ಟ್ರೋಫಿ ಟೂರ್ನಿಯಲ್ಲಿ ಆಡಲು ಆಯ್ಕೆಯಾಗುವ ಎಲ್ಲ ಅರ್ಹತೆಗಳೂ ಅವರಿಗಿದ್ದವು. ಏಕದಿನ ಮತ್ತು ಟಿ20 ಮಾದರಿಗಳಲ್ಲಿ, ಶೇಫಿಲ್ಡ್ ಶೀಲ್ಡ್‌ ಟ್ರೋಫಿಯಲ್ಲಿ ಅವರ ಆಮೋಘ ಆಟವು ಬೆನ್ನಿಗಿತ್ತು. ಆದರೆ ಇದುವರೆಗೂ ಅವರಿಗೆ ಟೆಸ್ಟ್ ಪದಾರ್ಪಣೆಯ ಅವಕಾಶ ಕೈಗೂಡಿಲ್ಲ. ಆದರೆ, ಅವರು ಆಲ್‌ರೌಂಡರ್‌ ಅಗಿ ಬೆಳೆಯುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗಲಿಲ್ಲ.

ADVERTISEMENT

ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಇದೇ ಮೊದಲ ಸಲ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ತಲುಪಿರುವುದರ ಹಿಂದೆ ’ಆಲ್‌ರೌಂಡರ್‌‘ ಮಾರ್ಕಸ್‌ ಆಟದ ಸಿಂಹಪಾಲು ಇದೆ. ಗ್ರೀಕ್ ಮೂಲದ ಆಸ್ಟ್ರೇಲಿಯಾ ನಿವಾಸಿ ಮಾರ್ಕಸ್‌. ಈ ವರ್ಷದ ಐಪಿಎಲ್‌ನಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದ ಅಗ್ರ 10 ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅವರಿಲ್ಲ. ಈ ಸಲದ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನ ಆ್ಯಂಡ್ರೆ ರಸೆಲ್ (₹ 8.5 ಕೋಟಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ಕೇದಾರ್ ಜಾಧವ್ (₹ 7.8 ಕೋಟಿ) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (₹ 10.75 ಕೋಟಿ) ಅವರು ನಿರಾಶೆ ಮೂಡಿಸಿದ್ದೇ ಹೆಚ್ಚು.

ಆದ್ದರಿಂದಲೇ ₹ 4.80 ಕೋಟಿಗೆ ಖರೀದಿಸಿದ್ದ ಡೆಲ್ಲಿ ತಂಡವು ’ಪೈಸಾ ವಸೂಲ್‌‘ ಎಂದು ಹಿರಿಹಿರಿ ಹಿಗ್ಗುತ್ತಿದೆ. ಏಕೆಂದರೆ, ತಂಡದಲ್ಲಿ ಪೃಥ್ವಿ ಶಾ, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್ ಅವರ ಬ್ಯಾಟಿಂಗ್‌ ಅಸ್ಥಿರತೆಯನ್ನು ಮಾರ್ಕಸ್ ಸರಿದೂಗಿಸಿದರು. ವೇಗಿ ಕಗಿಸೊ ರಬಾಡಗೆ ತಕ್ಕ ಜೊತೆ ನೀಡಿ, ಬೌಲಿಂಗ್‌ನಲ್ಲಿ ಮಿಂಚಿದರು. ಟೂರ್ನಿಯ ಮೊದಲ ಪಂದ್ಯದಿಂದಲೇ ಸ್ಟೋಯಿನಿಸ್ ಆಟ ರಂಗೇರಿದೆ. ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಆ ಪಂದ್ಯದಲ್ಲಿ ಮಾರ್ಕಸ್ 63 ರನ್ ಗಳಿಸಿದ್ದರು. ಗುರಿ ಬೆನ್ನತ್ತಿದ್ದ ಕಿಂಗ್ಸ್ ತಂಡವು ಗೆಲುವಿನ ಸನಿಹವಿದ್ದಾಗ, ಪಂದ್ಯ ಟೈ ಆಗಲು ಮಾರ್ಕಸ್‌ ಬೌಲಿಂಗ್ ಕಾರಣವಾಗಿತ್ತು. ಸೂಪರ್ ಓವರ್‌ನಲ್ಲಿ ಡೆಲ್ಲಿ ಜಯಭೇರಿ ಬಾರಿಸಿತು. ಮೊನ್ನೆಯಷ್ಟೇ ಎರಡನೇ ಕ್ವಾಲಿಫೈಯರ್‌ನಲ್ಲಿಯೂ ಮಾರ್ಕಸ್ ಆಟದ್ದೇ ಗಮ್ಮತ್ತು. ಅದರಲ್ಲಿ ಅವರು ಇನಿಂಗ್ಸ್‌ ಆರಂಭಿಸಿ, 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಅದರಿಂದಾಗಿ ಉತ್ತಮ ಆರಂಭ ಸಿಕ್ಕಿತ್ತು. ಅಷ್ಟೇ ಅಲ್ಲ; ಮೂರು ವಿಕೆಟ್ ಕಬಳಿಸಿ ’ಪಂದ್ಯಶ್ರೇಷ್ಠ‘ ಗೌರವ ಮುಡಿಗೆರಿಸಿದ್ದರು.

ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ 352 ರನ್‌ ಗಳಿಸಿ, 12 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಅದರಲ್ಲಿ ನಾಲ್ಕು ಅರ್ಧಶತಕಗಳೂ ಇವೆ. ಫೀಲ್ಡಿಂಗ್‌ನಲ್ಲಿ ಮಿಂಚುತ್ತಿರುವ ಅವರು ಇದುವರೆಗೆ ಹತ್ತು ಕ್ಯಾಚುಗಳನ್ನು ಬೊಗಸೆ ತುಂಬಿಕೊಂಡಿದ್ದಾರೆ.

ಟೂರ್ನಿಯ ಮೊದಲ ಸುತ್ತಿನಲ್ಲಿ ಅವರ ಆಟವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿಗೆ ಕಾರಣವಾಗಿತ್ತು. ಹೋದ ವರ್ಷ ಆರ್‌ಸಿಬಿಯಲ್ಲಿಯೂ ಮಾರ್ಕಸ್ ಆಡಿದ್ದರು. ಆದರೆ ಅವರನ್ನು ಬಿಡ್ಡಿಂಗ್‌ಗೆ ಬಿಡುಗಡೆ ಮಾಡಿದ್ದ ಆರ್‌ಸಿಬಿ ಕೈ ಕೈ ಹಿಸುಕಿಕೊಂಡಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.