ಕ್ವಿಂಟನ್ ಡಿ ಕಾಕ್
ಚಿತ್ರ ಕೃಪೆ: @cricbuzz
ಫೈಸಲಾಬಾದ್: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ 2023ರಲ್ಲಿ ನಿವೃತ್ತಿ ಘೋಷಿಸಿದ್ದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದು, ಪಾಕಿಸ್ತಾನ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಮಾತ್ರವಲ್ಲ, ಈ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಅಮೊಘ ಶತಕ ಸಿಡಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.
ಪಾಕಿಸ್ತಾನ ನೀಡಿದ್ದ 270 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣಾ ಆಫ್ರಿಕಾ ಕೇವಲ 40.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ವೇಳೆ ಆರಂಭಿಕ ಬ್ಯಾಟರ್ ಡಿ ಕಾಕ್ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 119 ಎಸೆತಗಳಲ್ಲಿ ಅಜೇಯ 123 ರನ್ ಗಳಿಸಿದರು.
ಡಿ ಕಾಕ್ ಅವರ ಜೊತೆಗೆ ಟೋನಿ ಡಿ ಜೋರ್ಜಿ (76 ರನ್, 63 ಎಸೆತ) ಹಾಗೂ ಇನ್ನೋರ್ವ ಆರಂಂಭಿಕ ಆಟಗಾರ ಲುವಾನ್-ಡ್ರೆ ಪ್ರಿಟೋರಿಯಸ್ (46 ರನ್, 40 ಎಸೆತ) ಗಳಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಸೈಮ್ ಅಯುಬ್ (53 ರನ್), ಸಲ್ಮಾನ್ ಆಘಾ (69 ರನ್) ಹಾಗೂ ಮೊಹಮ್ಮದ್ ನವಾಜ್ (59 ರನ್) ಗಳಿಸುವ ಮೂಲಕ ತಂಡದ ಮೊತ್ತವನ್ನು 269ಕ್ಕೆ ಮುಟ್ಟಿಸಿದರು. ದಕ್ಷಿಣ ಆಫ್ರಿಕಾ ಪರ ನಾಂಡ್ರೆ ಬರ್ಜರ್ (46\4) ವಿಕೆಟ್ ಪಡೆದು ಅತ್ಯುತ್ತಮ ಬೌಲರ್ ಎನಿಸಿಕೊಂಡರು.
ಪಾಕ್ ವಿರುದ್ಧ ಎರಡನೇ ಅತೀ ಹೆಚ್ಚು ರನ್ ಚೇಸ್
ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ 3 ಪಂದ್ಯಗಳ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿದೆ. ಮಾತ್ರವಲ್ಲ, ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ದಾಖಲಿಸಿದ ಎರಡನೇ ಅತೀ ದೊಡ್ಡ ರನ್ ಚೇಸ್ ಇದಾಗಿದೆ. ಇದಕ್ಕೂ ಮೊದಲು ಚೆನ್ನೈನಲ್ಲಿ ನಡೆದ 2023ರ ವಿಶ್ವಕಪ್‌ನಲ್ಲಿ 271 ರನ್ ಚೇಸ್ ಮಾಡಿತ್ತು.
ಗಿಬ್ಸ್ ದಾಖಲೆ ಮುರಿದ ಡಿ ಕಾಕ್:
ಈ ಶತಕದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತೀ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಡಿ ಕಾಕ್ ಮೂರನೇ ಸ್ಥಾನಕ್ಕೇರಿದರು. 21 ಶತಕ ಸಿಡಿಸಿದ್ದ ಹರ್ಷಲ್ ಗಿಬ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಹಾಶಿಮ್ ಆಮ್ಲಾ ಹಾಗೂ ಎಬಿ ಡಿವಿಲಿಯರ್ಸ್ ಮಾತ್ರ ಈ ಪಟ್ಟಿಯಲ್ಲಿ ಕಾಕ್‌ಗಿಂತ ಮುಂದಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ದ.ಆಫ್ರಿಕಾ ಪರ ಅತೀ ಹೆಚ್ಚು ಶತಕ ಸಿಡಿಸಿದವರು
27- ಹಾಶಿಮ್ ಆಮ್ಲಾ
25- ಎಬಿ ಡಿವಿಲಿಯರ್ಸ್
22- ಕ್ವಿಂಟನ್ ಡಿ ಕಾಕ್
21- ಹರ್ಷಲ್ ಗಿಬ್ಸ್
17- ಜಾಕ್ವೆಸ್ ಕಾಲಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.