ADVERTISEMENT

ರಾಹುಲ್‌, ಮಯಂಕ್ ಆಟಕ್ಕೆ ‘ಸನ್‌’ ಸ್ಟನ್‌

ಡೇವಿಡ್ ವಾರ್ನರ್ ಅರ್ಧಶತಕದ ಬಲದಿಂದ ಸವಾಲಿನ ಮೊತ್ತ; ಕ್ರಿಸ್‌ ಗೇಲ್ ವೈಫಲ್ಯ

ಪಿಟಿಐ
Published 8 ಏಪ್ರಿಲ್ 2019, 19:49 IST
Last Updated 8 ಏಪ್ರಿಲ್ 2019, 19:49 IST
ಶತಕದ ಜೊತೆಯಾಟ ಆಡಿದ ಮಯಂಕ್‌– ಕೆ.ಎಲ್‌.ರಾಹುಲ್‌ – ಪಿಟಿಐ ಚಿತ್ರ
ಶತಕದ ಜೊತೆಯಾಟ ಆಡಿದ ಮಯಂಕ್‌– ಕೆ.ಎಲ್‌.ರಾಹುಲ್‌ – ಪಿಟಿಐ ಚಿತ್ರ   

ಮೊಹಾಲಿ: ಕನ್ನಡಿಗರಾದ ಕೆ.ಎಲ್.ರಾಹುಲ್ (ಔಟಾಗದೆ 71; 53 ಎಸೆತ, 1 ಸಿಕ್ಸರ್, 7 ಬೌಂಡರಿ) ಮತ್ತು ಮಯಂಕ್ ಅಗರವಾಲ್ (55; 43 ಎ, 3 ಸಿ, 3 ಬೌಂ) ಅವರ ಶತಕದ ಜೊತೆಯಾಟದ ಬಲದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ಜಯ ಗಳಿಸಿತು.

ಸೋಮವಾರ ರಾತ್ರಿ ಇಲ್ಲಿನ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ 151 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕಿಂಗ್ಸ್‌ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಆದರೆ ರಾಹುಲ್ ಮತ್ತು ಮಯಂಕ್‌ ಎರಡನೇ ವಿಕೆಟ್‌ಗೆ 114 ರನ್‌ ಸೇರಿಸಿದರು. ಅಂತಿಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಬಳಿಸಿ ಸನ್‌ರೈಸರ್ಸ್ ಬೌಲರ್‌ಗಳು ಆತಂಕ ಸೃಷ್ಟಿಸಿದರು. ಆದರೆ ರಾಹುಲ್ ದಿಟ್ಟ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್‌ ಗೆದ್ದ ಕಿಂಗ್ಸ್ ಇಲೆವನ್ ನಾಯಕ ರವಿಚಂದ್ರನ್ ಅಶ್ವಿನ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳು ಸನ್‌ರೈಸರ್ಸ್‌ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ ಡೇವಿಡ್‌ ವಾರ್ನರ್ (ಔಟಾಗದೆ 73; 62 ಎಸೆತ, 1 ಸಿಕ್ಸರ್‌, 6 ಬೌಂಡರಿ) ಅವರ ಏಕಾಂಗಿ ಹೋರಾಟದ ಬೆಂಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ಸವಾಲಿನ ಮೊತ್ತ ಪೇರಿಸಿತು. ವಾರ್ನರ್ ಜೊತೆ ಇನಿಂಗ್ಸ್ ಆರಂಭಿಸಿದ ಜಾನಿ ಬೇಸ್ಟೊ ಎರಡನೇ ಓವರ್‌ನಲ್ಲೇ ಡಗ್‌ ಔಟ್‌ಗೆ ಮರಳಿದರು. ನಂತರ ವಾರ್ನರ್ ಮತ್ತು ವಿಜಯಶಂಕರ್‌ ಇನಿಂಗ್ಸ್ ಕಟ್ಟಿದರು. ಎರಡನೇ ವಿಕೆಟ್‌ಗೆ ಇವರಿಬ್ಬರು 49 ರನ್ ಕಲೆ ಹಾಕಿದರು.

ADVERTISEMENT

ವಾರ್ನರ್ ಏಕಾಂಗಿ ಹೋರಾಟ: ವಿಜಯ್ ಔಟಾದ ನಂತರ ಮೊಹಮ್ಮದ್ ನಬಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಇನ್ನೊಂದು ತುದಿಯಲ್ಲಿ ವಾರ್ನರ್‌ ಅಬ್ಬರಿಸಿದರು. 14ನೇ ಓವರ್‌ನಲ್ಲಿ ನಬಿ ರನ್‌ ಔಟ್‌ ಆಗುವುದರೊಂದಿಗೆ ತಂಡ ಮತ್ತೊಮ್ಮೆ ಆಘಾತಕ್ಕೆ ಒಳಗಾಯಿತು.

ತಂಡ ಮೊದಲ ಸಿಕ್ಸರ್‌ ಗಳಿಸಬೇಕಾದರೆ 16ನೇ ಓವರ್‌ ವರೆಗೆ ಕಾಯಬೇಕಾಗಿತ್ತು. ಮುಜೀಬ್ ಉರ್‌ ರಹಿಮಾನ್ ಹಾಕಿದ ಈ ಓವರ್‌ನ ಮೊದಲ ಎಸೆತವನ್ನು ವಾರ್ನರ್‌ ಸಿಕ್ಸರ್‌ಗೆ ಎತ್ತಿದರು.

ಇದೇ ಓವರ್‌ನಲ್ಲಿ ಅರ್ಧಶತಕವನ್ನೂ ಪೂರೈಸಿದರು. ಅರ್ಧಶತಕಕ್ಕೆ ಅವರು 49 ಎಸೆತಗಳನ್ನು ತೆಗೆದುಕೊಂಡರು. ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್‌ ಗಳಿಸಿದರು. 16ನೇ ಓವರ್ ಮುಕ್ತಾಯಕ್ಕೆ ತಂಡ ಮೂರಂಕಿ ಮೊತ್ತವನ್ನೂ ದಾಟಿತು.

ಕೊನೆಯ ಓವರ್‌ಗಳಲ್ಲಿ ತಂಡಕ್ಕೆ ನಿರೀಕ್ಷಿತ ಮೊತ್ತ ಗಳಿಸಲು ಆಗಲಿಲ್ಲ. ಭರವಸೆ ಮೂಡಿಸಿದ್ದ ಮನೀಷ್ ಪಾಂಡೆ ಅಂತಿಮ ಓವರ್‌ನ ಮೊದಲ ಎಸೆತದಲ್ಲೇ ಔಟಾದರು. ದೀಪಕ್ ಹೂಡ ಕೊನೆಯ ಎಸೆತದಲ್ಲಿ ಇನಿಂಗ್ಸ್‌ನ ಎರಡನೇ ಸಿಕ್ಸರ್ ಸಿಡಿಸಿ ಮೊತ್ತವನ್ನು 150ಕ್ಕೆ ತಲುಪಿಸಿದರು. ಅವರು ಕೇವಲ ಮೂರು ಎಸೆತಗಳಲ್ಲಿ 14 ರನ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.