ADVERTISEMENT

ಎಂಐಟಿ ಕ್ರೀಡಾ ವಿಚಾರ ಸಂಕಿರಣಕ್ಕೆ ರಾಹುಲ್ ದ್ರಾವಿಡ್‌ಗೆ ಆಹ್ವಾನ

ಪಿಟಿಐ
Published 6 ಏಪ್ರಿಲ್ 2021, 2:33 IST
Last Updated 6 ಏಪ್ರಿಲ್ 2021, 2:33 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ವಾಷಿಂಗ್ಟನ್: ಭಾರತದ ಖ್ಯಾತ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮೆಸಾಚುಸೆಟ್ಸ್‌ ತಂತ್ರಜ್ಞಾನ ಸಂಸ್ಥೆ (ಎಂಐಟಿ)ಯ ವಿಚಾರ ಸಂಕಿರಣದಲ್ಲಿ ಮಾತನಾಡಲು ಆಹ್ವಾನ ನೀಡಲಾಗಿದೆ. ಇದೇ ಮೊದಲ ಬಾರಿಗೆ ಎಂಐಟಿ ಕ್ರಿಕೆಟ್ ಕುರಿತು ಪ್ಯಾನಲ್ ಚರ್ಚೆಯನ್ನು ಆಯೋಜಿಸುತ್ತಿದೆ.

ಏಪ್ರಿಲ್ 8 ಮತ್ತು 9 ರಂದು ನಡೆಯುವ ಈವಿಚಾರ ಸಂಕಿರಣದ ವಿಷಯವು “ನನಗೆ ಡೇಟಾ ತೋರಿಸು”(ಶೋ ಮೀ ದ ಡೇಟಾ) ಎಂಬುದಾಗಿದೆ ಎಂದು ಸೋಮವಾರ ನೀಡಲಾಗಿರುವ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಈ ವರ್ಚುವಲ್ ಸಮಾವೇಶದಲ್ಲಿ, ದ್ರಾವಿಡ್ ಜೊತೆಗೆ ಪ್ರಸಿದ್ಧ ಕ್ರಿಕೆಟಿಗರಾದ ಗ್ಯಾರಿ ಕರ್ಸ್ಟನ್ ಮತ್ತು ಇಸಾ ಗುಹಾ ಸಹ ಸೇರಿಕೊಳ್ಳಲಿದ್ದಾರೆ.

ADVERTISEMENT

ಕರ್ಸ್ಟನ್, 2011ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದರು. ಇಸಾ ಗುಹಾ ಇಂಗ್ಲೆಂಡ್ ಪರ ಆಡಿದ್ದರು. ಈಗ ಜನಪ್ರಿಯ ಕಾಮೆಂಟೇಟರ್ ಆಗಿದ್ದಾರೆ.

ಡೆಲ್ ಟೆಕ್ನಾಲಜೀಸ್‌ನ ನಿರ್ದೇಶಕ ಅಲೋಕ್ ಆರ್ ಸಿಂಗ್ ಅವರು ಚರ್ಚೆಯನ್ನು ನಿರೂಪಣೆ ಮಾಡಲಿದ್ದಾರೆ.

ಕ್ರಿಕೆಟ್ ಬಗೆಗಿನ ವಿಶ್ಲೇಷಣೆಯ ಕುರಿತಾದ ಈ ಉನ್ನತ ಮಟ್ಟದ ಚರ್ಚೆಯು ಆಧುನಿಕ ಕ್ರಿಕೆಟ್ ಮತ್ತು ಅದರ ಜನಪ್ರಿಯ ಲೀಗ್‌ಗಳಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕುರಿತು ಹಲವಾರು ಒಳನೋಟಗಳನ್ನು ನೀಡುತ್ತದೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಅಮೆರಿಕದ ಪ್ರಮುಖ ಕ್ರೀಡೆಗಳಾದ ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್, ಬೇಸ್‌ಬಾಲ್ ಇತರ ಕ್ರೀಡೆಗಳ ಚರ್ಚೆ ವೇಳೆ ವಿಶ್ಲೇಷಣೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಕ್ರಿಕೆಟ್ ಕಲಿಕೆ ಬಗ್ಗೆಯೂ ತಿಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.