ADVERTISEMENT

ಮಗನೊಂದಿಗೆ ಕಣಕ್ಕಿಳಿದ ದ್ರಾವಿಡ್: KSCA 3ನೇ ಡಿವಿಷನ್ ಪಂದ್ಯದಲ್ಲಿ ಅಪ್ಪ–ಮಗನ ಆಟ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 17:49 IST
Last Updated 22 ಫೆಬ್ರುವರಿ 2025, 17:49 IST
ರಾಹುಲ್ ದ್ರಾವಿಡ್ ಮತ್ತು ಅವರ ವಿಕೆಟ್ ಗಳಿಸಿದ ಎ.ಆರ್. ಉಲ್ಲಾಸ್ 
ರಾಹುಲ್ ದ್ರಾವಿಡ್ ಮತ್ತು ಅವರ ವಿಕೆಟ್ ಗಳಿಸಿದ ಎ.ಆರ್. ಉಲ್ಲಾಸ್    

ಬೆಂಗಳೂರು: ನಗರದಿಂದ 15 ಕಿಲೋಮೀಟರ್ಸ್ ದೂರದಲ್ಲಿರುವ ಬಂಡೆ ಬೊಮ್ಮಸಂದ್ರದ ಎಸ್‌ಎಲ್‌ಎಸ್ ಕ್ರೀಡಾಂಗಣದಲ್ಲಿ ಶನಿವಾರ ಹಬ್ಬದ ವಾತಾವರಣ ಮನೆ ಮಾಡಿತ್ತು.  ಅಲ್ಲಿದ್ದವರು ರಾಜ್ಯ ಕ್ರಿಕೆಟ್‌ನ ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾದರು. 

ಭಾರತ ಕ್ರಿಕೆಟ್‌ ಕ್ಷೇತ್ರದ ದಿಗ್ಗಜ, ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಅವರ ಮಗ ಅನ್ವಯ್ ಜೊತೆಗೂಡಿ ಪಂದ್ಯವಾಡಿದರು. ಇಲ್ಲಿ ನಡೆದ ಕೆಎಸ್‌ಸಿಎ ಮೂರನೇ ಡಿವಿಷನ್ (ಗುಂಪು 1) ನಾಸೂರ್‌ ಮೆಮೊರಿಯಲ್ ಶೀಲ್ಡ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ (ಏಕದಿನ) ಅವರು ಆಡಿದರು. ಅಪ್ಪ–ಮಗ ವಿಜಯಾ ಕ್ರಿಕೆಟ್ ಕ್ಲಬ್‌ (ಮಾಲೂರು) ತಂಡದಲ್ಲಿ ಆಡಿದರು.  ಯಂಗ್ ಲಯನ್ಸ್ ಕ್ಲಬ್ ವಿರುದ್ಧ ಆಡಿದರು. 

ರಾಹುಲ್ ಅವರು  ಐಪಿಎಲ್‌ನಲ್ಲಿ ಆಡುವ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿದ್ದಾರೆ. ಅವರು ಶುಕ್ರವಾರ ರಾತ್ರಿ ಗುವಾಹಟಿಯಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಶನಿವಾರ ಬೆಳಿಗ್ಗೆ ವಿಜಯ ಸಿಸಿ ತಂಡದೊಂದಿಗೆ ಪಂದ್ಯದ ಸ್ಥಳಕ್ಕೆ ಹಾಜರಾದರು. 

ADVERTISEMENT

ಭಾರತ ತಂಡದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ಆಗಿದ್ದ ರಾಹುಲ್ ಅವರ ಆಗಮನದಿಂದ ಸ್ಥಳೀಯ ಕ್ರಿಕೆಟ್‌ ಪ್ರೇಮಿಗಳು ಪುಳಕಿತರಾದರು. ಸಾಮಾಜಿಕ ಜಾಲತಾಣಗಳಲ್ಲಿ ದ್ರಾವಿಡ್ ಅವರ ಚಿತ್ರಗಳು ಹರಿದಾಡಿದವು. 

ಬ್ಯಾಟಿಂಗ್ ದ್ರಾವಿಡ್ ಅವರು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. 8 ಎಸೆತಗಳಲ್ಲಿ 10 ರನ್‌ ಗಳಿಸಿದರು. ಎದುರಾಳಿ ತಂಡದ ಆಫ್‌ಸ್ಪಿನ್ನರ್ ಆರ್. ಉಲ್ಲಾಸ್ ಅವರ ಬೌಲಿಂಗ್‌ನಲ್ಲಿ ರಾಹುಲ್ ಔಟಾದರು. ಉಲ್ಲಾಸ್ ಅವರ ಖುಷಿಗೆ ಪಾರವೇ ಇರಲಿಲ್ಲ. 

‘ನಾನು ಬಾಲ್ಯದಿಂದಲೂ ರಾಹುಲ್ ಸರ್ ಅಭಿಮಾನಿ. ಇವತ್ತು ಅವರ ವಿಕೆಟ್ ಪಡೆದಿದ್ದು ನನ್ನ ಜೀವನದ ಅತ್ಯಂತ ಸ್ಮರಣೀಯ ಸಂಗತಿಯಾಗಿದೆ‌. ಅವರಿಗೆ ಬೌಲಿಂಗ್ ಮಾಡುವ ಬಹುಕಾಲದ ಕನಸು ಕೂಡ ಈಡೇರಿದೆ’ ಎಂದು 33 ವರ್ಷದ ಉಲ್ಲಾಸ್ ಭಾವುಕರಾಗಿ ನುಡಿದರು. 

ಪಂದ್ಯದಲ್ಲಿ ಅನ್ವಯ್ ಅವರು ತಮ್ಮ ತಂದೆಯನ್ನು ಮೀರಿಸಿ ಬ್ಯಾಟಿಂಗ್ ಮಾಡಿದರು. ಅವರು 60 ಎಸೆತಗಳಲ್ಲಿ 68 ರನ್ ಗಳಿಸಿದರು. ಇದರಿಂದಾಗಿ ವಿಜಯ ಸಿಸಿ ತಂಡವು 7ಕ್ಕೆ 345 ರನ್ ಗಳಿಸಿತು. ತಂಡದ ಸ್ವ‍ಪ್ನಿಲ್ ಶತಕ (107; 50ಎ, 12ಬೌಂಡರಿ, 4 ಸಿಕ್ಸರ್) ಹೊಡದರು.  ಯಂಗ್ ಲಯನ್ಸ್ ತಂಡದ ಎಜಿ ಆದಿತ್ಯ 4 ವಿಕೆಟ್ ಗಳಿಸಿದರು. 

ಈ ಹಿಂದೆ ಹಲವು ಅಂತರರಾಷ್ಟ್ರೀಯ ಕ್ರಿಕೆಟಿಗರು ತಮ್ಮ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ನಿದರ್ಶನಗಳಿವೆ. ಡಬ್ಲುಜಿ ಗ್ರೇಸ್‌–ಗ್ರೇಸ್ ಜೂನಿಯರ್, ಲಾಲಾ ಅಮರನಾಥ್– ಸುರೀಂದರ್ ಅಮರನಾಥ್, ಡೆನಿಸ್ ಆ್ಯಡಂ ಲಿಲ್ಲಿ, ಡೆನಿಸ್– ಹೀತ್ ಸ್ಟ್ರೀಕ್, ಶಿವನಾರಾಯಣ–ತೇಜನಾರಾಯಣ್ ಚಂದ್ರಪಾಲ್ ಮತ್ತು ಇಯಾನ್–ಲಿಯಾಮ್ ಬೋತಂ ಅವರು ಆಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.