ADVERTISEMENT

ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್ಸ್: 3ನೇ ಸ್ಥಾನದಲ್ಲಿ ರಾಹುಲ್‌, 7ರಲ್ಲಿ ಕೊಹ್ಲಿ

ಪಿಟಿಐ
Published 23 ಡಿಸೆಂಬರ್ 2020, 12:45 IST
Last Updated 23 ಡಿಸೆಂಬರ್ 2020, 12:45 IST
ಕೆ.ಎಲ್‌ ರಾಹುಲ್‌
ಕೆ.ಎಲ್‌ ರಾಹುಲ್‌    

ದುಬೈ : ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್‌.ರಾಹುಲ್‌ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ ಏಳನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಧವಾರ ರ‍್ಯಾಂಕಿಂಗ್‌ಗಳನ್ನು ಪ್ರಕಟಿಸಲಾಗಿದೆ.

ಎಲ್ಲ ಮೂರೂ ವಿಭಾಗಗಳ (ಬ್ಯಾಟ್ಸ್‌ಮನ್‌, ಬೌಲರ್‌ ಹಾಗೂ ಆಲ್‌ರೌಂಡರ್‌) ರ‍್ಯಾಂಕಿಂಗ್‌ನ ಅಗ್ರ 10 ಮಂದಿಯ ಪಟ್ಟಿಯಲ್ಲಿ ಭಾರತದ ವಿರಾಟ್ ಮತ್ತು ರಾಹುಲ್ ಮಾತ್ರ ಇದ್ದಾರೆ.

ರಾಹುಲ್ ಬಳಿ ಸದ್ಯ 816 ಪಾಯಿಂಟ್‌ಗಳಿವೆ. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಡೇವಿಡ್ ಮಲಾನ್ (915) ಮತ್ತು ಬಾಬರ್ ಆಜಂ (820) ಮೊದಲ ಮತ್ತು ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರು 697 ಪಾಯಿಂಟ್ಸ್ ಕಲೆಹಾಕಿದ್ದಾರೆ.

ADVERTISEMENT

ಕ್ರಿಕೆಟ್‌ನ ಮೂರೂ ಮಾದರಿಯ ಬ್ಯಾಟ್ಸ್‌ಮನ್‌ಗಳ ಕ್ರಮಾಂಕದಲ್ಲಿ ಕೊಹ್ಲಿ ಅವರು ಅಗ್ರ 10ರ ಪಟ್ಟಿಯಲ್ಲಿದ್ದಾರೆ. ಏಕದಿನದಲ್ಲಿ ಮೊದಲ ಹಾಗೂ ಟೆಸ್ಟ್ ಮಾದರಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಸರಣಿಯನ್ನು 2–1ರಿಂದ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಟಿಮ್ ಸೀಫರ್ಟ್‌ 24 ಸ್ಥಾನಗಳ ಏರಿಕೆಯೊಂದಿಗೆ ಜೀವನಶ್ರೇಷ್ಠ ಒಂಬತ್ತನೇ ಸ್ಥಾನ ಹಾಗೂ ಬೌಲಿಂಗ್ ವಿಭಾಗದಲ್ಲಿ ಟಿಮ್ ಸೌಥಿ ಏಳನೇ ಸ್ಥಾನದಲ್ಲಿದ್ದಾರೆ.

ಟಿ20 ಬೌಲಿಂಗ್ ಹಾಗೂ ಆಲ್‌ರೌಂಡ್‌ ವಿಭಾಗದ ಕ್ರಮಾಂಕದಲ್ಲಿ ಅಫ್ಗಾನಿಸ್ತಾನ ಜೋಡಿ ಮೊದಲ ಸ್ಥಾನದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್‌ ಖಾನ್‌, ಆಲ್‌ರೌಂಡರ್‌ಗಳಲ್ಲಿ ಮೊಹಮ್ಮದ್‌ ನಬಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

ತಂಡಗಳ ಕ್ರಮಾಂಕದಲ್ಲಿ ಇಂಗ್ಲೆಂಡ್‌ (275 ಪಾಯಿಂಟ್ಸ್) ಮೊದಲ ಸ್ಥಾನ ಅಲಂಕರಿಸಿದೆ. ಆಸ್ಟ್ರೇಲಿಯಾ (272) ಹಾಗೂ ಭಾರತ (268) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.