ADVERTISEMENT

IND vs SA: ಕನ್ನಡಿಗ ರಾಹುಲ್ ‘ಸೆಂಚುರಿಯನ್‘

ಟೆಸ್ಟ್: ಕರ್ನಾಟಕದ ಜೋಡಿಯ ಶತಕದ ಜೊತೆಯಾಟ; ಭಾರತಕ್ಕೆ ಮೊದಲ ದಿನದ ಶ್ರೇಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2021, 20:30 IST
Last Updated 26 ಡಿಸೆಂಬರ್ 2021, 20:30 IST
ಕೆ.ಎಲ್. ರಾಹುಲ್ ಶತಕ ಸಂಭ್ರಮ  –ಎಎಫ್‌ಪಿ ಚಿತ್ರ
ಕೆ.ಎಲ್. ರಾಹುಲ್ ಶತಕ ಸಂಭ್ರಮ  –ಎಎಫ್‌ಪಿ ಚಿತ್ರ   

ಸೆಂಚುರಿಯನ್: ಇಲ್ಲಿಯ ಸೂಪರ್‌ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ಭಾನುವಾರ ಕರ್ನಾಟಕದ ಪ್ರತಿಭೆಗಳದ್ದೇ ಪಾರುಪತ್ಯ.ದಕ್ಷಿಣ ಆಫ್ರಿಕಾ ಎದುರು ಆರಂಭವಾದ ಮೊದಲ ಟೆಸ್ಟ್‌ನಲ್ಲಿ ಕನ್ನಡಿಗ ರಾಹುಲ್ ಚೆಂದದ ಶತಕ ಬಾರಿಸಿದರು. ಅಲ್ಲದೇ ತಮ್ಮ ಗೆಳೆಯ ಮಯಂಕ್ ಅಗರವಾಲ್ ಜೊತೆಗೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನೂ ಆಡಿದರು.

ಇದರಿಂದಾಗಿ ಭಾರತ ತಂಡವು ದಿನದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 272 ರನ್‌ ಗಳಿಸಿತು. ರಾಹುಲ್ (ಬ್ಯಾಟಿಂಗ್ 122; 248ಎ, 4X16, 6X1) ಮತ್ತು ಅಜಿಂಕ್ಯ ರಹಾನೆ (ಬ್ಯಾಟಿಂಗ್ 40; 81ಎ,4X8) ಕ್ರೀಸ್‌ನಲ್ಲಿದ್ದಾರೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ‘ಕರ್ನಾಟಕದ ಜೋಡಿ’ ಮಯಂಕ್ ಮತ್ತು ರಾಹುಲ್ ಇನಿಂಗ್ಸ್ ಆರಂಭಿಸಿದರು. 18ನೇ ಓವರ್‌ನಲ್ಲಿ ಮಯಂಕ್ ಬ್ಯಾಟ್ ಹೊರಅಂಚಿಗೆ ತಾಗಿದ್ದ ಚೆಂಡನ್ನು ಇಡಿಯುವ ಪ್ರಯತ್ನದಲ್ಲಿ ಕೀಪರ್ ಕ್ವಿಂಟನ್ ಡಿ ಕಾಕ್ ಸಫಲರಾಗಲಿಲ್ಲ. ಇದು ಮಯಂಕ್‌ಗೆ ವರದಾನವಾಯಿತು. ಊಟದ ವಿರಾಮದ ವೇಳೆಗೆ ಈ ಜೋಡಿಯು 83 ರನ್ ಸೇರಿಸಿತು. ನಂತರವೂ ಇಬ್ಬರ ಜೊತೆಯಾಟವು ಬೌಲರ್‌ಗಳಿಗೆ ತಲೆನೋವಾಯಿತು. 89 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಯಂಕ್ ಬ್ಯಾಟಿಂಗ್ ಆಕರ್ಷಕವಾಗಿತ್ತು. ಇನ್ನೊಂದೆಡೆ ರಾಹುಲ್ ದೊಡ್ಡ ಹೊಡೆತಗಳಿಗೆ ಕೈಹಾಕದೇ ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದರು.

ADVERTISEMENT

ಇವರಿಬ್ಬರ ಜೊತೆಯಾಟದಲ್ಲಿ 117 ರನ್‌ಗಳು ಸೇರಿದವು. ತಮ್ಮ ಎರಡನೇ ಸ್ಪೆಲ್ ಬೌಲಿಂಗ್ ಮಾಡಲು ಬಂದ ಲುಂಗಿ ಗಿಡಿ ಈ ಜೊತೆಯಾಟವನ್ನು ಮುರಿದರು. ಎಲ್‌ಬಿಡಬ್ಲ್ಯು ಬಲೆಗೆ ಮಯಂಕ್ ಬಿದ್ದರು. ಆದರೆ, ಅಂಪೈರ್ ಎರಸ್ಮಸ್ ಔಟ್ ಕೊಡಲಿಲ್ಲ. ಆತಿಥೇಯ ತಂಡದ ನಾಯಕ ಅಂಪೈರ್ ತೀರ್ಪು ಮರುಪರಿಶೀಲನಾ ವ್ಯವಸ್ಥೆ (ಯುಡಿಆರ್‌ಎಸ್) ಅವಕಾಶ ಬಳಸಿಕೊಂಡರು. ಯಶಸ್ವಿಯೂ ಆದರು. ಮಯಂಕ್ ಬೇಸರದಿಂದ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು.

ನಂತರದ ಎಸೆತದಲ್ಲಿಯೇ ಚೇತೇಶ್ವರ್ ಪೂಜಾರ ಔಟಾದರು. ಲುಂಗಿ ಹ್ಯಾಟ್ರಿಕ್ ಅವಕಾಶಕ್ಕೆ ವಿರಾಟ್ ತಡೆಯೊಡ್ಡಿದರು. ಲಯ ಕಂಡುಕೊಳ್ಳಲು ಪ್ರಯತ್ನಿಸಿದ ಅವರು ಒಂದಿಷ್ಟು ಆಕರ್ಷಕ ಹೊಡೆತಗಳನ್ನು ಪ್ರಯೋಗಿಸಿ ಗಮನ ಸೆಳೆದರು. ರಾಹುಲ್ ಜೊತೆಗೆ 82 ರನ್‌ಗಳನ್ನೂ ಸೇರಿಸಿದರು.

ಇದೆಲ್ಲದರ ನಡುವೆ ರಾಹುಲ್ ಸಂಪೂರ್ಣ ಏಕಾಗ್ರತೆ ಸಾಧಿಸಿ ಬ್ಯಾಟಿಂಗ್ ಮಾಡಿದರು. ಬ್ಯಾಕ್‌ಫುಟ್‌ ಮತ್ತು ಫ್ರಂಟ್‌ಫುಟ್ ಚಲನೆಯಲ್ಲಿ ಸೈ ಎನಿಸಿಕೊಂಡರು. ತಾಳ್ಮೆಯೇ ಅವರ ಅಸ್ತ್ರವಾಗಿತ್ತು. 127 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 53ನೇ ಓವರ್‌ನಲ್ಲಿ ಮಲ್ದರ್ ಬೌಲಿಂಗ್‌ನಲ್ಲಿ ರಾಹುಲ್ ಕ್ಯಾಚ್ ಕೈಬಿಟ್ಟ ಜೆನ್ಸೆನ್ ತಪ್ಪಿಗೆ ಆತಿಥೇಯ ತಂಡ ಕೈ ಕೈ ಹಿಸುಕಿಕೊಳ್ಳಬೇಕಾಯಿತು. ರಾಹುಲ್ ಶತಕದತ್ತ ದಾಪುಗಾಲಿಟ್ಟರು. ತಾವೆದುರಿಸಿದ 218ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ರಾಹುಲ್ ಗೆ ಇದು ಟೆಸ್ಟ್‌ನಲ್ಲಿ ಏಳನೇ ಶತಕ. ಅವರು ಕಳೆದ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದರು. ರಾಹುಲ್, ಗಿಡಿ, ರಬಾಡ ಅವರ ಬೌನ್ಸರ್‌ಗಳನ್ನು ದಿಟ್ಟತನದಿಂದ ಎದುರಿಸಿದರು.

ಬಹುತೇಕ ಕೊನೆಯ ಅವಕಾಶ ಪಡೆದುಕೊಂಡಿರುವ ರಹಾನೆ ಕೂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಅವರು 73 ರನ್ ಸೇರಿಸಿದ್ದಾರೆ.

ಶ್ರೇಯಸ್ ಅಯ್ಯರ್, ಇಶಾಂತ್ ಶರ್ಮಾ, ಹನುಮವಿಹಾರಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶಾರ್ದೂಲ್ ಠಾಕೂರ್ ಸೇರಿದಂತೆ ನಾಲ್ವರು ಮಧ್ಯಮವೇಗಿ ಮತ್ತು ಸ್ಪಿನ್ನರ್ ಅಶ್ವಿನ್ ಅವಕಾಶ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.