ADVERTISEMENT

ಐಪಿಎಲ್‌ 2019: ಗೇಲ್‌–ರಾಹುಲ್ ಮೇಲೆ ಕಣ್ಣು

ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ಗೆ ಪಂಜಾಬ್‌ ಸವಾಲು

ಪಿಟಿಐ
Published 24 ಮಾರ್ಚ್ 2019, 20:34 IST
Last Updated 24 ಮಾರ್ಚ್ 2019, 20:34 IST
ಕೆ.ಎಲ್‌. ರಾಹುಲ್‌ (ಎಡ) ಮತ್ತು ಕ್ರಿಸ್‌ ಗೇಲ್‌
ಕೆ.ಎಲ್‌. ರಾಹುಲ್‌ (ಎಡ) ಮತ್ತು ಕ್ರಿಸ್‌ ಗೇಲ್‌   

ಜೈಪುರ: ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲಿಗ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದಾರೆ. ಈಗ ಅವರಿಗೆ ಮತ್ತೊಂದು ಸವಾಲು ಎದುರಾಗಿದೆ.

ಐಪಿಎಲ್‌ನ ಮೂರನೇ ದಿನವಾದ ಸೋಮವಾರ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವನ್ ಪಂಜಾಬ್ ತಂಡಗಳು ಸೆಣಸುವಾಗ ಎಲ್ಲರ ಕಣ್ಣು ರಾಯಲ್ಸ್‌ನ ಸ್ಟೀವ್ ಸ್ಮಿತ್ ಮೇಲೆ ಬೀಳಲಿದೆ. ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ಮಿತ್ ಮತ್ತು ಡೇವಿಡ್ ವಾರ್ನರ್‌ ಅವರ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿತ್ತು.

ಡೇವಿಡ್ ವಾರ್ನರ್ ಭಾನುವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ ರಾಬಾದ್ ಪರವಾಗಿ 53 ಎಸೆತಗಳಲ್ಲಿ 85 ರನ್‌ ಗಳಿಸಿ ಮಿಂಚಿದ್ದರು. ಸೋಮವಾರದ ಪಂದ್ಯದಲ್ಲಿ ಸ್ಮಿತ್‌ ಕೂಡ ಇದೇ ರೀತಿಯ ಬ್ಯಾಟಿಂಗ್ ಮೂಲಕ ಮಿಂಚುವರೇ ಎಂಬುದು ಕುತೂಹಲ ಕೆರಳಿಸಿರುವ ಅಂಶ.

ADVERTISEMENT

ನಿಷೇಧವು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತು ಅನ್ವಯವಾಗಿದ್ದ ಕಾರಣ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅವರು ಆಡಿದ್ದರು. ಆದರೆ ಕೆಲವೇ ಪಂದ್ಯಗಳ ನಂತರ ಮೊಣಕೈಗೆ ಗಾಯಗೊಂಡು ಮರಳಿದ್ದರು. ಮೇ ತಿಂಗಳಲ್ಲಿ ಆರಂಭವಾಗಲಿರುವ ವಿಶ್ವ ಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಲಯಕ್ಕೆ ಮರಳಲು ಐಪಿಎಲ್ ನೆರವಾಗಲಿದೆ.

ಅಜಿಂಕ್ಯ ರಹಾನೆ ನಾಯಕತ್ವದ ರಾಯಲ್ಸ್ ತಂಡ ಈ ಬಾರಿಯ ಉತ್ತಮ ತಂಡಗಳಲ್ಲಿ ಒಂದೆನಿಸಿಕೊಂಡಿದೆ. ಇಂಗ್ಲೆಂಡ್‌ನ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಜೋಸ್ ಬಟ್ಲರ್‌ ಮತ್ತು ಸ್ಯಾಮ್‌ ಕರಣ್ ಅವರು ತಂಡದ ದೊಡ್ಡ ಆಸ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗಕ್ಕೆ ಬಲ ತುಂಬಲು ಜಯದೇವ ಉನದ್ಕತ್‌, ವರುಣ್ ಆ್ಯರನ್‌, ಜೊಫ್ರಾ ಆರ್ಚರ್‌ ಮತ್ತು ಇಶ್ ಸೋಧಿ ಇದ್ದಾರೆ.

ಗೇಲ್‌–ರಾಹುಲ್‌ ಮಿಂಚುವ ಭರವಸೆ: ರವಿಚಂದ್ರನ್ ಅಶ್ವಿನ್ ನಾಯಕತ್ವದ ಪಂಜಾಬ್‌ ತಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ ಮತ್ತು ಕೆ.ಎಲ್‌.ರಾಹುಲ್ ಮೇಲೆ ಭರವಸೆ ಇರಿಸಿಕೊಂಡಿದೆ.

ಅಶ್ವಿನ್‌ ಅವರಿಗೆ ಐಪಿಎಲ್‌ನಲ್ಲಿ ಇನ್ನೂ ಸೂಕ್ತ ರೀತಿಯಲ್ಲಿ ಮಿಂಚಲು ಆಗಲಿಲ್ಲ. ಆದ್ದರಿಂದ ಮೊದಲ ಪಂದ್ಯ ಅವರಿಗೆ ಸವಾಲಾಗಲಿದೆ. ಮೊಹಮ್ಮದ್ ಶಮಿ, ಆ್ಯಂಡ್ರ್ಯೂಟೈ, ಮುಜೀಬ್‌ ಉರ್ ರಹಿಮಾನ್‌ ಮುಂತಾದವರ ಮೇಲೆಯೂ ಒತ್ತಡವಿದೆ.

ಪಂದ್ಯ ಆರಂಭ: ರಾತ್ರಿ 8.00
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.