ADVERTISEMENT

ರಣಜಿ ಕ್ವಾರ್ಟರ್‌ಫೈನಲ್ ಇಂದಿನಿಂದ: ಗೆಲುವಿನ ‘ಬೆಲ್ಲ’ಕ್ಕೆ ಯಾರ ಮುತ್ತಿಗೆ?

ಚಿನ್ನಸ್ವಾಮಿಯಲ್ಲಿ ಕರ್ನಾಟಕ–ರಾಜಸ್ಥಾನ ಮುಖಾಮುಖಿ

ಗಿರೀಶದೊಡ್ಡಮನಿ
Published 14 ಜನವರಿ 2019, 20:00 IST
Last Updated 14 ಜನವರಿ 2019, 20:00 IST
ಅಭ್ಯಾಸದಲ್ಲಿ ನಿರತರಾಗಿರುವ ಕರ್ನಾಟಕ ತಂಡದ ಆಟಗಾರರು
ಅಭ್ಯಾಸದಲ್ಲಿ ನಿರತರಾಗಿರುವ ಕರ್ನಾಟಕ ತಂಡದ ಆಟಗಾರರು   

ಬೆಂಗಳೂರು: ಇಡೀ ನಾಡು ಸಂಕ್ರಾಂತಿ ಹಬ್ಬದ ಸಡಗರದಲ್ಲಿದೆ. ಈ ಸಂಭ್ರಮಕ್ಕೆ ಮತ್ತಷ್ಟು ಸಂತಸವನ್ನು ತುಂಬುವ ಛಲದೊಂದಿಗೆ ಕರ್ನಾಟಕ ರಣಜಿ ಕ್ರಿಕೆಟ್ ತಂಡವು ಕಣಕ್ಕಿಳಿಯಲು ಸಜ್ಜಾಗಿದೆ.

ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಯಲಿರುವ ಈ ಬಾರಿ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡವು ರಾಜಸ್ಥಾನ ಬಳಗವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಎಲೀಟ್ ಎ–ಬಿ ಗುಂಪಿನ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದ ಕರ್ನಾಟಕ ತಂಡಕ್ಕೆ ತವರಿನಲ್ಲಿಯೇ ಎಂಟರ ಘಟ್ಟದ ಪಂದ್ಯವಾಡುವ ಅವಕಾಶ ಲಭಿಸಿದೆ. ಸಿ ಗುಂಪಿನಲ್ಲಿ ಒಂದೂ ಸೋಲು ಕಾಣದೇ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿರುವ ರಾಜಸ್ಥಾನ ತಂಡವು ಕರ್ನಾಟಕಕ್ಕೆ ಕಠಿಣ ಸವಾಲೊಡ್ಡುವ ಎಲ್ಲ ಸಾಧ್ಯತೆಗಳೂ ಇವೆ.

ಪ್ರಯೋಗಶಾಲೆಯಾದ ಲೀಗ್: ಕರ್ನಾಟಕ ತಂಡಕ್ಕೆ ಈ ಬಾರಿಯ ಲೀಗ್ ಹಂತವು ಪ್ರಯೋಗಶಾಲೆಯಂತಾಗಿತ್ತು. ಎಂಟು ಪಂದ್ಯಗಳು ನಡೆದ ಈ ಹಂತದಲ್ಲಿ ರಾಜ್ಯ ತಂಡಕ್ಕೆ ಎಂಟು ಹೊಸ ಪ್ರತಿಭೆಗಳು ಪದಾರ್ಪಣೆ ಮಾಡಿದರು.

ADVERTISEMENT

ಭಾರತ ಮತ್ತು ಭಾರತ ‘ಎ’ ತಂಡಗಳಿಗೆ ಕೆಲವು ಅನುಭವಿಗಳು ಆಡಲು ತೆರಳಿದ್ದರಿಂದ ಹೊಸ ಹುಡುಗರಿಗೆ ಅವಕಾಶ ಸಿಕ್ಕಿತು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಬಿ.ಆರ್. ಶರತ್, ಕೆ.ವಿ. ಸಿದ್ಧಾರ್ಥ್, ಪ್ರಸಿದ್ಧ ಕೃಷ್ಣಪ್ಪ ಅವರು ತಮಗೆ ಲಭಿಸಿದ ಅವಕಾಶಗಳನ್ನು ಸಮರ್ಥವಾಗಿಯೇ ಬಳಸಿಕೊಂಡರು. ಕೆಲವು ವರ್ಷಗಳಿಂದ ತಂಡದಲ್ಲಿ ಗಟ್ಟಿ ಹೆಜ್ಜೆಯೂರಲು ಪ್ರಯತ್ನಿಸುತ್ತಿದ್ದ ಆರಂಭಿಕ ಬ್ಯಾಟ್ಸ್‌ಮನ್ ಡೇಗಾ ನಿಶ್ಚಲ್, ಮಧ್ಯಮವೇಗಿ ರೋನಿತ್ ಮೋರೆ ಮತ್ತು ಎಡಗೈ ಸ್ಪಿನ್ನರ್ ಜೆ. ಸುಚಿತ್ ಈ ಬಾರಿ ಉತ್ತಮ ಫಲ ಕಂಡಿದ್ದಾರೆ. ಇದರೊಂದಿಗೆ ಆಯ್ಕೆಗಾರರ ಕೆಲಸವನ್ನು ಸುಲಭಗೊಳಿಸಿದ್ದಾರೆ.

ಹೊಸ ಪ್ರತಿಭೆಗಳು ಮಿಂಚುತ್ತಿರುವುದರಿಂದ ಅನುಭವಿ ಆಟಗಾರರು ತಮ್ಮ ಲಯಕ್ಕೆ ಮರಳುವುದು ಅನಿವಾರ್ಯವಾ
ಗಿದೆ. ವಿಶೇಷವಾಗಿ ಕರುಣ್ ನಾಯರ್, ಆರ್. ಸಮರ್ಥ್ ತಮ್ಮ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳುವ ಅಗತ್ಯವಿದೆ. ನಾಯಕತ್ವ ಪಟ್ಟ ಬಿಟ್ಟ ಮೇಲೆ ತುಸು ಹಗುರವಾಗಿರುವ ವಿನಯಕುಮಾರ್ ಛತ್ತೀಸಗಡದ ಎದುರು ಆಲ್‌ರೌಂಡ್ ಆಟವಾಡಿದ್ದರು. ಪೂರ್ಣಾವಧಿ ನಾಯಕನಾದ ನಂತರವೂ ಮನೀಷ್ ಪಾಂಡೆ ತಮ್ಮ ಬ್ಯಾಟಿಂಗ್ ಲಯವನ್ನು ಬಿಟ್ಟುಕೊಟ್ಟಿಲ್ಲ ಆಲೂರು ಪಂದ್ಯದಲ್ಲಿ ಶತಕ ಹೊಡೆದಿದ್ದರು. ವಡೋದರಾದಲ್ಲಿ ಬರೋಡ ಎದುರು ನಡೆದಿದ್ದ ಕೊನೆಯ ಪಂದ್ಯದಲ್ಲಿಯೂ ಎಲ್ಲ ಬ್ಯಾಟ್ಸ್‌ಮನ್‌ಗಳು ತರಗೆಲೆಯಂತೆ ಉರುಳಿದರೂ ಮನೀಷ್ ಮತ್ತು ಸಿದ್ಧಾರ್ಥ್ ಮಿಂಚಿದ್ದರು.

ಮಹತ್ವದ ಸಂದರ್ಭಗಳಲ್ಲಿ ಶ್ರೇಯಸ್ ಗೋಪಾಲ್ ಮತ್ತು ಅಭಿಮನ್ಯು ಮಿಥುನ್ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ಲೀಗ್ ಹಂತದಲ್ಲಿ ಸೋಲು ಗೆಲುವುಗಳ ಲೆಕ್ಕಾಚಾರಕ್ಕೆ ಅವಕಾಶವಿತ್ತು. ಆದರೆ ನಾಕೌಟ್ ಹಂತದಲ್ಲಿ ಸೋಲಿಗೆ ಕ್ಷಮೆ ಇಲ್ಲ. ಹೋದ ಋತುವಿನ ಕ್ವಾರ್ಟರ್‌ಫೈನಲ್‌ನಲ್ಲಿ (ನಾಗಪುರದಲ್ಲಿ ನಡೆದಿತ್ತು) ಮುಂಬೈ ಎದುರು ಭರ್ಜರಿಯಾಗಿ ಗೆದ್ದಿದ್ದ ಕರ್ನಾಟಕ, ಸೆಮಿಫೈನಲ್‌ನಲ್ಲಿ ವಿದರ್ಭ ಎದುರು ಕೈಚೆಲ್ಲಿತ್ತು. ಆದ್ದರಿಂದ ತಂಡದ ವೇಗದ ಶಕ್ತಿ ವಿನಯ್, ಮಿಥುನ್ ಮತ್ತು ರೋನಿತ್ ಮೇಲೆಯ ಹೆಚ್ಚು ನಿರೀಕ್ಷೆ ಇದೆ.

ಬ್ಯಾಟಿಂಗ್ ಮಧ್ಯಮಕ್ರಮಾಂಕ ಪಾಂಡೆ ಮತ್ತು ಸಿದ್ಧಾರ್ಥ್ ಮೇಲೆ ಅವಲಂಬಿತವಾಗಿದೆ. ಈ ಹೊರೆ ತಪ್ಪಬೇಕಾದರೆ ಮೇಲಿನ ಕ್ರಮಾಂಕದಲ್ಲಿ ಕರುಣ್ ಮತ್ತು ಸಮರ್ಥ್ ಉತ್ತಮ ಕಾಣಿಕೆ ಸಲ್ಲಿಸುವ ಅಗತ್ಯವಿದೆ.

ಯಾವುದೇ ಹಂತದಲ್ಲಿಯೂ ಮೈಮರೆಯುವಂತಿಲ್ಲ. ಕೈಚೆಲ್ಲಿದ ಕ್ಯಾಚು, ಮಿಸ್‌ಫೀಲ್ಡಿಂಗ್‌ಗಳು ತುಟ್ಟಿಯಾಗಬಹುದು. ಭರ್ತಿ ಆತ್ಮವಿಶ್ವಾಸದಲ್ಲಿರುವ ರಾಜಸ್ಥಾನ ಬಳಗವು ಯಾವುದೇ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಬೆಂಗಳೂರಿನಲ್ಲಿ ಈ ಹಿಂದೆ ಉಭಯ ತಂಡಗಳು ಮುಖಾಮುಖಿಯಾದಾಗ ಕರ್ನಾಟಕ ಮೇಲುಗೈ ಸಾಧಿಸಿದ್ದೇ ಹೆಚ್ಚು. ಆದ್ದರಿಂದ ಸೋಲಿನ ಸೇಡುಗಳನ್ನು ತೀರಿಸಿಕೊಳ್ಳುವ ಯೋಜನೆಯೂ ಎದುರಾಳಿ ತಂಡದಲ್ಲಿದೆ. ರಾಷ್ಟ್ರೀಯ ತಂಡದಲ್ಲಿ ಆಡಿರುವ ಅನುಭವಿ ದೀಪಕ್ ಚಾಹರ್ ಬಲ ತಂಡಕ್ಕೆ ಇದೆ. ಸ್ಪರ್ಧಾತ್ಮಕ ಪಿಚ್‌ನಲ್ಲಿ ಟಾಸ್ ಗೆದ್ದ ತಂಡವು ತೆಗೆದುಕೊಳ್ಳುವ ನಿರ್ಧಾರವೂ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು

ಪಂದ್ಯ ಆರಂಭ: 9.30.

ತಂಡಗಳು ಇಂತಿವೆ

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಆರ್. ವಿನಯಕುಮಾರ್, ಡೇಗಾ ನಿಶ್ಚಲ್, ಕರುಣ್ ನಾಯರ್, ಆರ್. ಸಮರ್ಥ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೃಷ್ಣಪ್ಪ ಗೌತಮ್, ಪ್ರಸಿದ್ಧ ಎಂ ಕೃಷ್ಣ, ಕೆ.ವಿ. ಸಿದ್ಧಾರ್ಥ್, ಜೆ. ಸುಚಿತ್, ಬಿ.ಅರ್. ಶರತ್, ಶರತ್ ಶ್ರೀನಿವಾಸ್ (ಇಬ್ಬರೂ ವಿಕೆಟ್‌ಕೀಪರ್), ಪವನ್ ದೇಶಪಾಂಡೆ, ಯರೇಗೌಡ (ಮುಖ್ಯ ಕೋಚ್), ಎಸ್. ಅರವಿಂದ್ (ಸಹಾಯಕ ಕೋಚ್)

ರಾಜಸ್ಥಾನ: ಮಹಿಪಾಲ್ ಲೊಮ್ರೊರ್ (ನಾಯಕ), ಅಮಿತಕುಮಾರ್ ಗೌತಮ್, ರಾಬಿನ್ ಬಿಷ್ಟ್, ಅಶೋಕ್ ಮನೇರಿಯಾ, ರಾಜೇಶ್ ಬಿಷ್ಣೋಯ್, ಸಲ್ಮಾನ್ ಖಾನ್, ದೀಪಕ್ ಚಾಹರ್, ರಾಹುಲ್ ಚಾಹರ್, ಅನಿಕೇತ್ ಚೌಧರಿ, ತನ್ವೀರ್ ಉಲ್ ಹಕ್, ತಜೀಂದರ್ ಸಿಂಗ್, ಅರ್ಜಿತ್ ಗುಪ್ತಾ, ನಾಥು ಸಿಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.