ADVERTISEMENT

ರಣಜಿ ಕ್ರಿಕೆಟ್: ವೈಶಾಖ, ವಾಸುಕಿ, ವಿದ್ವತ್ ದಾಳಿಗೆ ತತ್ತರಿಸಿದ ರಾಜಸ್ಥಾನ

ಗಿರೀಶದೊಡ್ಡಮನಿ
Published 10 ಜನವರಿ 2023, 16:56 IST
Last Updated 10 ಜನವರಿ 2023, 16:56 IST
ಕರ್ನಾಟಕದ ವೈಶಾಖ ವಿಜಯಕುಮಾರ್ ಸಂಭ್ರಮ  –ಪ್ರಜಾವಾಣಿ ಚಿತ್ರಗಳು/ಬಿ.ಎಚ್‌. ಶಿವಕುಮಾರ್
ಕರ್ನಾಟಕದ ವೈಶಾಖ ವಿಜಯಕುಮಾರ್ ಸಂಭ್ರಮ  –ಪ್ರಜಾವಾಣಿ ಚಿತ್ರಗಳು/ಬಿ.ಎಚ್‌. ಶಿವಕುಮಾರ್   

ಆಲೂರು (ಬೆಂಗಳೂರು): ಮೂವರು ವೇಗಿಗಳ ಶಿಸ್ತುಬದ್ಧ ದಾಳಿಯ ಮುಂದೆ ರಾಜಸ್ಥಾನ ತಂಡವು ಮಂಗಳವಾರ ಇಲ್ಲಿ ಆರಂಭವಾದ ರಣಜಿ ಕ್ರಿಕೆಟ್ ಪಂದ್ಯದ ಮೊದಲ ದಿನವೇ ಕುಸಿಯಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಆತಿಥೇಯ ತಂಡವು ಮೊದಲ ದಿನವೇ ಇನಿಂಗ್ಸ್‌ ಮುನ್ನಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಟಾಸ್ ಗೆದ್ದ ರಾಜಸ್ಥಾನ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ತಲಾ ನಾಲ್ಕು ವಿಕೆಟ್ ಗಳಿಸಿದ ವೈಶಾಖ ವಿಜಯಕುಮಾರ್, ವಾಸುಕಿ ಕೌಶಿಕ್ ಹಾಗೂ ಎರಡು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡ ವಿದ್ವತ್ ಕಾವೇರಪ್ಪ ಅವರ ದಾಳಿಯ ಮುಂದೆ ರಾಜಸ್ಥಾನ ತಂಡವು 45.3 ಓವರ್‌ಗಳಲ್ಲಿ 129 ರನ್ ಗಳಿಸಿ ಆಲೌಟ್ ಆಯಿತು.

ಚಹಾ ವಿರಾಮಕ್ಕೆ ಇನ್ನೂ 40 ನಿಮಿಷಗಳು ಬಾಕಿಯಿರುವಾಗಲೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ದಿನದಾಟದ ಮುಕ್ತಾಯಕ್ಕೆ 30 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 106 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ ಮುನ್ನಡೆಗೆ 23 ರನ್‌ಗಳ ಅಗತ್ಯವಿದೆ. ಮಯಂಕ್ (ಬ್ಯಾಟಿಂಗ್ 49) ಮತ್ತು ನಿಕಿನ್ ಜೋಸ್ (ಬ್ಯಾಟಿಂಗ್ 10) ಕ್ರೀಸ್‌ನಲ್ಲಿದ್ದಾರೆ.

ADVERTISEMENT

12 ವಿಕೆಟ್‌ಗಳು: ಹದವಾದ ಬೌನ್ಸ್ ಮತ್ತು ಸ್ವಿಂಗ್‌ ಎಸೆತಗಳಿಗೆ ನೆರವಾದ ಸ್ಪರ್ಧಾತ್ಮಕ ಪಿಚ್‌ನಲ್ಲಿ ಪಂದ್ಯದ ಮೊದಲ ದಿನವೇ ಒಂದು ಡಜನ್ ವಿಕೆಟ್ ಪತನವಾದವು. ಅವೆಲ್ಲವೂ ಮಧ್ಯಮವೇಗಿಗಳ ಪಾಲಾದವು.

ಲೈನ್ ಮತ್ತು ಲೆಂಗ್ತ್‌ ಜೊತೆಗೆ ವೇಗಕ್ಕೂ ಆದ್ಯತೆ ನೀಡುವ ವಿದ್ವತ್ ಈ ಪಂದ್ಯದಲ್ಲಿಯೂ ಎದುರಾಳಿ ತಂಡವು ಖಾತೆ ತೆರೆಯುವ ಮುನ್ನವೇ ಆಘಾತ ನೀಡಿದರು. ಇನಿಂಗ್ಸ್‌ನ ಎರಡನೇ ಎಸೆತದಲ್ಲಿಯೇ ಆರಂಭಿಕ ಬ್ಯಾಟರ್ ಯಶ್ ಕೊಠಾರಿ ಅವರು ವಿದ್ವತ್‌ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ನಾಲ್ಕು ಓವರ್‌ಗಳ ನಂತರ ಕೌಶಿಕ್ ಎಸೆತದಲ್ಲಿ ಮಹಿಪಾಲ್ ಲೊಮ್ರೊರ್ ಅವರ ವಿಕೆಟ್ ಕಬಳಿಸಿದರು.

ವಿದ್ವತ್ ತಮ್ಮ ಎರಡನೇ ಸ್ಪೆಲ್‌ನಲ್ಲಿಯೂ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಆದಿತ್ಯ ಗಡ್ವಾಲ್ ಬಿದ್ದರು. ಇನ್ನೊಂದೆಡೆ ನೆಲಕಚ್ಚಿ ಆಡುತ್ತಿದ್ದ ಕುನಾಲ್ ಸಿಂಗ್ ರಾಥೋಡ್ (33; 54ಎ, 4X5, 6X1) ಅವರ ವಿಕೆಟ್ ಗಳಿಸುವ ಮೂಲಕ ವೈಶಾಖ ತಮ್ಮ ಖಾತೆ ತೆರೆದರು. ಇದರಿಂದಾಗಿ ಭೋಜನ ವಿರಾಮಕ್ಕೆ ರಾಜಸ್ಥಾನ ತಂಡವು 84 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರದ ಅವಧಿಯಲ್ಲಿ ರಾಜಸ್ಥಾನ ತಂಡದ ಪತನಕ್ಕೆ ವೈಶಾಖ ಮತ್ತು ಕೌಶಿಕ್ ‘ಜೊತೆಯಾಟ’ ಕಾರಣವಾಯಿತು. ತಂಡದ ಮೊತ್ತಕ್ಕೆ 45 ರನ್‌ಗಳು ಸೇರುವಷ್ಟರಲ್ಲಿ ಆರು ವಿಕೆಟ್‌ಗಳು ಪತನವಾದವು. ವೈಶಾಖ ಕಳೆದ ಪಂದ್ಯದಲ್ಲಿ ಛತ್ತೀಸಗಢ ಎದುರಿನ ಎರಡನೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ್ದರು.

ಮಯಂಕ್ ನೋಬಾಲ್: ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅವರಿಗೆ ಆಲೂರಿನಲ್ಲಿ ಅದೃಷ್ಟವು ‘ನೋಬಾಲ್’ ರೂಪದಲ್ಲಿ ಜೊತೆಗೂಡಿತು. 22 ರನ್‌ ಗಳಿಸಿದ್ದ ಅವರು ಅರಾಫತ್ ಖಾನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ರಾಥೋಡ್‌ಗೆ ಔಟಾಗಿದ್ದರು. ಆದರೆ, ಮೂರನೇ ಅಂಪೈರ್ ನೋಬಾಲ್ ತೀರ್ಪಿತ್ತರು. ಆದರೆ ಈ ಋತುವಿನಲ್ಲಿ ಮೂರು ಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಆರ್. ಸಮರ್ಥ್‌ಗೆ (8 ರನ್) ಇಲ್ಲಿ ಅದೃಷ್ಟ ಕೈಕೊಟ್ಟಿತು. ಅನುಮಾನಸ್ಪದ ತೀರ್ಪಿಗೆ ಔಟಾಗಿ ಬೇಸರದಿಂದ ನಿರ್ಗಮಿಸಿದರು.

ಮರಳಿದ ದೇವದತ್ತ: ಅನಾರೋಗ್ಯದಿಂದಾಗಿ ಕಳೆದ ನವೆಂಬರ್‌ನಿಂದ ಕ್ರಿಕೆಟ್‌ನಿಂದ ದೂರವಿದ್ದ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ತಂಡಕ್ಕೆ ಮರಳಿದರು. ಮಯಂಕ್ ಜೊತೆಗೆ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ ದೇವದತ್ತ (32; 47ಎ) 74 ರನ್ ಸೇರಿಸಿದರು.

ಜೇನ್ನೊಣಗಳ ಹಿಂಡು: ಕರ್ನಾಟಕದ ಇನಿಂಗ್ಸ್‌ ಆರಂಭವಾಗಿ ಅರ್ಧ ಗಂಟೆ ಕಳೆದಿತ್ತು. ಜೇನ್ನೊಣಗಳ ದೊಡ್ಡ ಗುಂಪೊಂದು ಮೈದಾನದ ಮೇಲೆ ಹಾರಿದವು. ಅವುಗಳಿಂದ ರಕ್ಷಿಸಿಕೊಳ್ಳಲು ಆಟಗಾರರು ಮತ್ತು ಅಂಪೈರ್‌ಗಳು ತಾವು ನಿಂತ ಜಾಗದಲ್ಲಿಯೇ ಮಕಾಡೆ ಮಲಗಿದರು. ಜೀನ್ನೊಣಗಳು ಚದುರಿದ ನಂತರ ಮತ್ತೆ ಆಟ ಆರಂಭಿಸಿದರು. ಇದರಿಂದಾಗಿ ಕೆಲವು ನಿಮಿಷಗಳ ಕಾಲ ಆಟ ಸ್ಥಗಿತವಾಯಿತು.

*
ತಂಡದಲ್ಲಿ ಆಪ್ತ ವಾತಾವರಣವಿದೆ. ಸಹಬೌಲರ್‌ಗಳ ನೆರವು ನನ್ನ ಯಶಸ್ಸಿಗೆ ಕಾರಣವಾಗುತ್ತಿದೆ. ತಂಡಸ್ಫೂರ್ತಿಯಿಂದ ಆಡುತ್ತಿರುವುದರಿಂದ ಎಲ್ಲರೂ ಮನಸಾರೆ ಆನಂದಿಸುತ್ತಿದ್ಧೇವೆ
–ವೈಶಾಖ ವಿಜಯಕುಮಾರ್, ಕರ್ನಾಟಕ ಬೌಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.