ADVERTISEMENT

ರಣಜಿ ಕ್ರಿಕೆಟ್: ಕರ್ನಾಟಕ–ಉತ್ತರ ಪ್ರದೇಶ ಪಂದ್ಯ ಡ್ರಾ, ರಾಜ್ಯ ತಂಡಕ್ಕೆ ಮೂರು ಅಂಕ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 9:20 IST
Last Updated 20 ಡಿಸೆಂಬರ್ 2019, 9:20 IST
ಶತಕ ಗಳಿಸಿದ ಅಲ್ಮಾಸ್ ಶೌಕತ್
ಶತಕ ಗಳಿಸಿದ ಅಲ್ಮಾಸ್ ಶೌಕತ್   

ಹುಬ್ಬಳ್ಳಿ: ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ರಣಜಿ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.

ಇನಿಂಗ್ಸ್‌ ಮುನ್ನಡೆ ಪಡೆದುಕೊಂಡ ಕರುಣ್‌ ನಾಯರ್ ನಾಯಕತ್ವದ ಕರ್ನಾಟಕ ತಂಡ ಮೂರು ಅಂಕಗಳನ್ನು ಪಡೆದರೆ, ಉತ್ತರ ಪ್ರದೇಶಕ್ಕೆ ಒಂದು ಅಂಕ ಲಭಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಉತ್ತರ ಪ್ರದೇಶ 281 ರನ್ ಗಳಿಸಿತ್ತು. ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 135.5 ಓವರ್‌ಗಳಲ್ಲಿ 321 ರನ್ ಕಲೆಹಾಕಿ 40 ರನ್‌ಗಳ ಮುನ್ನಡೆ ಸಾಧಿಸಿತ್ತು. ಉತ್ತರ ಪ್ರದೇಶ ದ್ವಿತೀಯ ಇನಿಂಗ್ಸ್‌ನಲ್ಲಿ ಮುನ್ನಡೆಯ ಮೊತ್ತವನ್ನು ಮೊದಲ ಅವಧಿಯಲ್ಲಿ ಚುಕ್ತಾ ಮಾಡಿತು.

ADVERTISEMENT

ಈ ತಂಡ ಅಂತಿಮವಾಗಿ 69.1 ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ 204 ರನ್‌ ಗಳಿಸಿತ್ತು. ಆರಂಭಿಕ ಬ್ಯಾಟ್ಸ್‌ಮನ್‌ ಅಲ್ಮಾಸ್‌ ಶೌಕತ್‌ (ಅಜೇಯ 103, 210 ಎಸೆತ, 14 ಬೌಂಡರಿಗಳು) ಶತಕ ಗಳಿಸಿದ ಬಳಿಕ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಉಭಯ ತಂಡಗಳ ನಾಯಕರು ಸಮ್ಮತಿಸಿದರು.

ಮೊದಲ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದ ಅಭಿಮನ್ಯು ಮಿಥುನ್‌ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಕರ್ನಾಟಕ ತನ್ನ ಹಿಂದಿನ ಪಂದ್ಯದಲ್ಲಿ ತಮಿಳುನಾಡು ಎದುರು ಗೆಲುವು ಪಡೆದು ಆರು ಅಂಕಗಳನ್ನು ಕಲೆಹಾಕಿತ್ತು. ಉತ್ತರ ಪ್ರದೇಶ ರೈಲ್ವೇಸ್ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಈ ತಂಡ ಮೊದಲ ಎರಡು ಪಂದ್ಯಗಳಿಂದ ಒಟ್ಟು ಎರಡು ಅಂಕಗಳನ್ನು ಗಳಿಸಿತು. ಕರ್ನಾಟಕದ ಖಾತೆಯಲ್ಲಿ ಒಟ್ಟು ಒಂಬತ್ತು ಅಂಕಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.