ADVERTISEMENT

ಕರ್ನಾಟಕದ ಬ್ಯಾಟಿಂಗ್‌ಗೆ ‘ಗ್ರಹಣ’: ನಾಯಕನ ಆಟವಾಡಿದ ಕರುಣ್

ರಣಜಿ ಕ್ರಿಕೆಟ್‌: ಕನ್ವರ್‌ ಅಭಿನಯ್, ರಿಷಿ ಧವನ್‌ ಪ್ರಭಾವಿ ಬೌಲಿಂಗ್

ಮಹಮ್ಮದ್ ನೂಮಾನ್
Published 26 ಡಿಸೆಂಬರ್ 2019, 7:05 IST
Last Updated 26 ಡಿಸೆಂಬರ್ 2019, 7:05 IST
ಕರುಣ್‌ ನಾಯರ್‌ ಬ್ಯಾಟಿಂಗ್‌ ವೈಖರಿ – ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌
ಕರುಣ್‌ ನಾಯರ್‌ ಬ್ಯಾಟಿಂಗ್‌ ವೈಖರಿ – ಪ್ರಜಾವಾಣಿ ಚಿತ್ರ/ ಸವಿತಾ ಬಿ.ಆರ್‌   

ಮೈಸೂರು: ರಾಜ್ಯದ ವಿವಿಧೆಡೆ ಗುರುವಾರ ಕಂಕಣ ಸೂರ್ಯಗ್ರಹಣದ ಅಪರೂಪದ ವಿದ್ಯಮಾನ ವೀಕ್ಷಿಸಲು ಜನರು ಕಾತರರಾಗಿದ್ದರೆ, ಹಿಮಾಚಲ ಪ್ರದೇಶ ತಂಡದ ವೇಗದ ಬೌಲರ್‌ ಕನ್ವರ್‌ ಅಭಿನಯ್ ಸಿಂಗ್‌ ಅವರು ಒಂದು ದಿನ ಮುಂಚಿತವಾಗಿಯೇ ಕರ್ನಾಟಕ ತಂಡಕ್ಕೆ ‘ಗ್ರಹಣ’ ಹಿಡಿಸಿದರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 166 ರನ್‌ಗಳಿಗೆ ಆಲೌಟಾಯಿತು. ಸೊಗಸಾದ ಬೌಲಿಂಗ್‌ ನಡೆಸಿದ ಕನ್ವರ್ (37ಕ್ಕೆ 5) ಆತಿಥೇಯರನ್ನು ಅಲ್ಪಮೊತ್ತಕ್ಕೆ ನಿಯಂತ್ರಿಸಿದರು.

ನಾಯಕ ಕರುಣ್‌ ನಾಯರ್‌ (81; 185 ಎಸೆತ, 8ಬೌಂಡರಿ) ಅವರ ಏಕಾಂಗಿ ಹೋರಾಟ ಇಲ್ಲದೇ ಇದ್ದಲ್ಲಿ, ತಂಡದ ಸಂಕಷ್ಟ ಮತ್ತಷ್ಟು ಹೆಚ್ಚುತ್ತಿತ್ತು. ಆತಿಥೇಯ ತಂಡ ತಕ್ಕ ಪ್ರತ್ಯುತ್ತರ ನೀಡಿದ್ದು, ಮೊದಲ ದಿನದಾಟದ ಅಂತ್ಯಕ್ಕೆ 29 ರನ್‌ಗಳಿಗೆ ಎದುರಾಳಿಗಳ ಮೂರು ವಿಕೆಟ್‌ ಉರುಳಿಸಿದೆ. ಪ್ರತೀಕ್‌ ಜೈನ್‌ (11ಕ್ಕೆ 2) ಪ್ರವಾಸಿ ತಂಡಕ್ಕೆ ಮುಂಬರುವ ಅಪಾಯದ ಸೂಚನೆ ನೀಡಿದ್ದಾರೆ.

ADVERTISEMENT

ಆರಂಭದಲ್ಲೇ ಆಘಾತ: ಟಾಸ್‌ ಗೆದ್ದು ಬ್ಯಾಟ್ ಮಾಡಿದ ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ ಕಾದಿತ್ತು. ಬೆಳಗಿನ ತಣ್ಣಗಿನ ಮತ್ತು ಮೋಡ ಕವಿದ ವಾತಾವರಣದ ಲಾಭ ಗಿಟ್ಟಿಸುವಲ್ಲಿ ಹಿಮಾಚಲ ಪ್ರದೇಶದ ವೇಗಿಗಳು ಯಶಸ್ವಿಯಾದರು.

ಅತಿಯಾದ ಆತ್ಮವಿಶ್ವಾಸ ಮಯಂಕ್ ಅಗರವಾಲ್‌ಗೆ ಮುಳುವಾಯಿತು. ಕನ್ವರ್‌ ಬೌಲ್‌ ಮಾಡಿದ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಚೆಂಡು ಆಫ್‌ಸ್ಟಂಪ್‌ನಿಂದ ಹೊರಹೋಗುತ್ತಿದ್ದುದನ್ನು ಗಮನಿಸಿ ಕಟ್‌ ಮಾಡಿ ಬೌಂಡರಿಗೆ ಅಟ್ಟಲು ಮುಂದಾದರು. ಆದರೆ ನಿರೀಕ್ಷೆಗೂ ಮೀರಿ ಪುಟಿದ ಚೆಂಡು ಬ್ಯಾಟ್‌ನ ಅಂಚನ್ನು ಸವರಿಕೊಂಡು ವಿಕೆಟ್‌ ಕೀಪರ್ ಅಂಕುಶ್‌ ಬೇನ್ಸ್‌ ಕೈಸೇರಿತು.

ಅತ್ಯುತ್ತಮ ಫಾರ್ಮ್‌ನಲ್ಲಿರುವ ದೇವದತ್ತ ಪಡಿಕ್ಕಲ್‌ ಸೊನ್ನೆ ಸುತ್ತಿದರು. ಕನ್ವರ್‌ ಬೌಲಿಂಗ್‌ನಲ್ಲಿ ಚೆಂಡನ್ನು ಫ್ಲಿಕ್‌ ಮಾಡಲು ಮುಂದಾಗಿ ಸ್ಕ್ವೇರ್‌ಲೆಗ್‌ ಕ್ಷೇತ್ರದಲ್ಲಿದ್ದ ನಿಖಿಲ್‌ಗೆ ಕ್ಯಾಚಿತ್ತರು. ಆರ್‌.ಸಮರ್ಥ್‌ ಕೂಡಾ ಇವರನ್ನು ಹಿಂಬಾಲಿಸಿದರು. ಮೂರನೇ ವಿಕೆಟ್‌ ಉರುಳಿದಾಗ ತಂಡದ ಮೊತ್ತ 10. ಕನ್ವರ್‌ ಮೊದಲ ಸ್ಪೆಲ್‌ನಲ್ಲಿ (7–4–12–3) ಬೆಂಕಿಯುಗುಳಿದರು.

ಡಿ.ನಿಶ್ಚಲ್‌ ಮತ್ತು ಕರುಣ್‌ ತಂಡದ ಇನಿಂಗ್ಸ್‌ಗೆ ತೇಪೆ ಹಚ್ಚುವ ಕೆಲಸಕ್ಕೆ ಮುಂದಾದರು. ಉತ್ತಮವಾಗಿ ಆಡುತ್ತಿದ್ದ ನಿಶ್ಚಲ್‌ (16; 47 ಎಸೆತ) ಅವರನ್ನು ಎಲ್‌ಬಿ ಬಲೆಯಲ್ಲಿ ಬೀಳಿಸಿದ ರಿಷಿ ಧವನ್‌ ಈ ಜತೆಯಾಟ ಮುರಿದರು.

ಕರುಣ್‌ ಆಸರೆ: ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ, ಕರುಣ್ ತಂಡದ ಇನಿಂಗ್ಸ್‌ಗೆ ಸ್ಥಿರತೆಯೊದಗಿಸಲು ಪ್ರಯತ್ನಿಸಿದರು. ಅವರಿಗೆ ಶ್ರೇಯಸ್‌ ಗೋಪಾಲ್‌ (27, 52 ಎಸೆತ, 4 ಬೌಂ) ಅಲ್ಪ ಸಾಥ್‌ ನೀಡಿದರು. ಈ ಜೋಡಿ ಐದನೇ 110 ಎಸೆತಗಳಲ್ಲಿ 56 ರನ್‌ ಸೇರಿಸಿತು.

ಚಹಾ ವಿರಾಮಕ್ಕೆ ಅಲ್ಪ ಮುನ್ನ ಶ್ರೇಯಸ್‌ ಮತ್ತು ಬಿ.ಆರ್‌.ಶರತ್ ಬೆನ್ನುಬೆನ್ನಿಗೆ ಔಟಾದರು. ಕರುಣ್‌ ಕೊನೆಯಲ್ಲಿ ಜೆ.ಸುಚಿತ್‌ ಮತ್ತು ಅಭಿಮನ್ಯು ಮಿಥುನ್ (21, 19 ಎಸೆತ, 2 ಬೌಂ) ನೆರವಿನಿಂದ ತಂಡದ ಮೊತ್ತ ಹಿಗ್ಗಿಸಿದರು. ಅವರು ರಿಷಿ ಧವನ್‌ಗೆ ವಿಕೆಟ್‌ ಒಪ್ಪಿಸಿ ಒಂಬತ್ತನೆಯವಾಗಿ ಔಟಾದರು. ಮುಂದಿನ ಎಸೆತದಲ್ಲಿ ಪ್ರತೀಕ್‌ ಜೈನ್‌ ವಿಕೆಟ್‌ ಪಡೆದ ಧವನ್‌ ಅವರು ಕರ್ನಾಟಕದ ಇನಿಂಗ್ಸ್‌ಗೆ ತೆರೆ ಎಳೆದರು.

ಸೂರ್ಯಗ್ರಹಣ: ಆಟದ ಅವಧಿ ಬದಲು
ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಣಜಿ ಪಂದ್ಯದ ಎರಡನೇ ದಿನದಾಟದ ಅವಧಿಯಲ್ಲಿ ಬದಲಾವಣೆ ತರಲಾಗಿದೆ.

ಗುರುವಾರದ ದಿನದಾಟ ಬೆಳಿಗ್ಗೆ 9.30ರ ಬದಲು 11.15ಕ್ಕೆ ಆರಂಭವಾಗಲಿದ್ದು, ಸಂಜೆ 5.30ರ ವರೆಗೆ ಆಟ ಮುಂದುವರಿಯಲಿದೆ. 90 ಓವರ್‌ಗಳ ಬದಲು 79 ಓವರ್‌ಗಳ ಆಟ ನಡೆಯಲಿದೆ ಎಂದು ಪಂದ್ಯದ ರೆಫರಿ ಪಿ.ರಂಗನಾಥ್‌ ತಿಳಿಸಿದರು. ‘ಸೂರ್ಯಗ್ರಹಣದ ಕಾರಣ ಸ್ಥಳೀಯ ಕ್ರಿಕೆಟ್‌ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ರಣಜಿ ಪಂದ್ಯಗಳ ದಿನದಾಟದ ಅವಧಿಯನ್ನು ಬದಲಿಸುವಂತೆ ಬಿಸಿಸಿಐ ಸೂಚಿಸಿದೆ. ಅದ್ದರಿಂದ ಕೆಎಸ್‌ಸಿಎ ಜತೆ ಚರ್ಚಿಸಿ ಈ ಬದಲಾವಣೆ ತರಲಾಗಿದೆ’ ಎಂದು ಹೇಳಿದರು.

**

ಎದುರಾಳಿ ತಂಡದವರು ಚೆನ್ನಾಗಿ ಬೌಲ್‌ ಮಾಡಿದರು. ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡದ್ದು ನಮಗೆ ಹಿನ್ನಡೆ ಉಂಟುಮಾಡಿತು.
-ಕರುಣ್‌ ನಾಯರ್‌, ಕರ್ನಾಟಕದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.