ADVERTISEMENT

ರಣಜಿ ಫೈನಲ್ | ಸೌರಾಷ್ಟ್ರ ಹಿಡಿತದಲ್ಲಿ ಪಂದ್ಯ; ಒತ್ತಡದಲ್ಲಿ ಬಂಗಾಳ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 12:45 IST
Last Updated 11 ಮಾರ್ಚ್ 2020, 12:45 IST
   

ರಾಜ್‌ಕೋಟ್‌:ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರ ತಂಡ ಹಿಡಿತ ಸಾಧಿಸಿದ್ದು,ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಬಂಗಾಳ ತಂಡ ಇನ್ನೂ 291 ರನ್ ಗಳಿಸಬೇಕಿದೆ.

ಸೋಮವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 425ರನ್‌ ಪೇರಿಸಿ ಆಲೌಟ್‌ ಆಯಿತು. ಈ ತಂಡದ ಅರ್ಪಿತ್ ವಾಸ್ವಡ ಗಳಿಸಿದ ಶತಕ (106) ಹಾಗೂ ಅವಿ ಬರೋಟ್‌ (54), ವಿಶ್ವರಾಜ್ ಜಡೇಜಾ (54) ಮತ್ತು ಚೇತೇಶ್ವರ ಪೂಜಾರ (66) ಅರ್ಧಶತಕಗಳನ್ನುಬಾರಿಸಿ ನೆರವಾಗಿದ್ದರು.

ಈ ಮೊತ್ತೆದುರು ಬ್ಯಾಟಿಂಗ್ ಆರಂಭಿಸಿದ ಬಂಗಾಳ ಸದ್ಯ ಮೂರು ವಿಕೆಟ್‌ ಕಳೆದುಕೊಂಡು 134ರನ್‌ ಕಲೆಹಾಕಿದೆ. ಇನಿಂಗ್ಸ್‌ ಆರಂಭಿಸಿದ ನಾಯಕ ಅಭಿಮನ್ಯು ಈಶ್ವರನ್‌ (09) ಹಾಗೂ ಸುದೀಪ್‌ ಕುಮಾರ್‌ ಘರಾಮಿ (26)ತಂಡದ ಮೊತ್ತ 35 ಆಗಿದ್ದಾಗ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಸೌರಾಷ್ಟ್ರ ಪಾಳಯದಲ್ಲಿ ಮೂಡಿತ್ತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಸುದೀಪ್‌ ಚಟರ್ಜಿ ಮತ್ತು ಮನೋಜ್‌ ತಿವಾರಿ ಅದಕ್ಕೆ ಅವಕಾಶ ನೀಡದಂತೆ ಆಡಿದರು.

ADVERTISEMENT

ಈ ಜೋಡಿ 89 ರನ್‌ ಸೇರಿಸಿತು. 116 ಎಸೆತಗಳನ್ನು ಎದುರಿಸಿ30.17ರ ಸರಾಸರಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದ ತಿವಾರಿ, 35 ರನ್‌ ಗಳಿಸಿದ್ದ ವೇಳೆ ಚಿರಾಗ್‌ ಜಾನಿ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದರು. 145 ಎಸೆತಗಳಲ್ಲಿ 47ರನ್‌ ಗಳಿಸಿರುವ ಚಟರ್ಜಿ ಮತ್ತು ಅನುಭವಿ ವೃದ್ಧಿಮಾನ್‌ ಸಾಹ (4) ಕ್ರೀಸ್‌ನಲ್ಲಿದ್ದಾರೆ.

ಇನ್ನೂ ಎರಡು ದಿನಗಳ ಆಟ ಬಾಕಿ ಇದ್ದು, ಉಳಿದಿರುವ 7 ವಿಕೆಟ್‌ಗಳಿಂದ 191ರನ್‌ ಗಳಿಸಿದರಷ್ಟೇ ಬಂಗಾಳಕ್ಕೆ ಇನಿಂಗ್ಸ್‌ ಮುನ್ನಡೆ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.