ADVERTISEMENT

ಅ.15ರಿಂದ ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಮೊದಲ ಎದುರಾಳಿ

ಬಿಸಿಸಿಐನಿಂದ ದೇಶಿ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಅ.15ರಿಂದ ರಣಜಿ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 13:50 IST
Last Updated 10 ಆಗಸ್ಟ್ 2025, 13:50 IST
<div class="paragraphs"><p>ಹೋದ ರಣಜಿ ಋತುವಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ವಿದರ್ಭ ತಂಡವು ಟ್ರೋಫಿಯೊಂದಿಗೆ ಸಂಭ್ರಮಿಸಿತು&nbsp; &nbsp;</p></div>

ಹೋದ ರಣಜಿ ಋತುವಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ವಿದರ್ಭ ತಂಡವು ಟ್ರೋಫಿಯೊಂದಿಗೆ ಸಂಭ್ರಮಿಸಿತು   

   

–ಪಿಟಿಐ ಸಂಗ್ರಹ ಚಿತ್ರ

ಬೆಂಗಳೂರು: ದೇಶಿ ಕ್ರಿಕೆಟ್‌ ‘ರಾಜ’ ಎಂದೇ ಕರೆಸಿಕೊಳ್ಳುವ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್‌ 15ರಿಂದ ಆರಂಭವಾಗಲಿದೆ. ಹೋದ ವರ್ಷದ ಮಾದರಿಯಲ್ಲಿಯೇ ಎರಡು ಹಂತಗಳಲ್ಲಿ ಟೂರ್ನಿಯು ಆಯೋಜನೆಗೊಳ್ಳಲಿದೆ. ಕರ್ನಾಟಕ ತಂಡವು ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರದ ಎದುರು ಕಣಕ್ಕಿಳಿಯಲಿದೆ. 

ADVERTISEMENT

ಈ ಪಂದ್ಯವು  ಅ.15 ರಿಂದ 18ರವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಎಲೀಟ್ ಹಂತದಲ್ಲಿ ಕರ್ನಾಟಕವು ಸೌರಾಷ್ಟ್ರ, ಗೋವಾ, ಕೇರಳ, ಮಹಾರಾಷ್ಟ್ರ, ಚಂಡೀಗಢ, ಮಧ್ಯಪ್ರದೇಶ ಮತ್ತು ಪಂಜಾಬ್ ತಂಡಗಳನ್ನು ಎದುರಿಸಲಿದೆ. 

ಟೂರ್ನಿಯ ಲೀಗ್ ವಿಭಾಗದ ಮೊದಲ ಹಂತವು ಅ.15 ರಿಂದ ನವೆಂಬರ್ 19ರವರೆಗೆ ನಡೆಯುವುದು. ಇದರಲ್ಲಿ ಐದು ಪಂದ್ಯಗಳನ್ನು ಆಡಿಸಲಾಗುವುದು.  ಎರಡನೇ ಹಂತವು 2026ರ ಜನವರಿ 22 ರಿಂದ ಫೆ.1 ರವರೆಗೆ ನಡೆಯಲಿದೆ. ನಾಕೌಟ್ ಹಂತವು ಫೆ. 6 ರಿಂದ 28ರವರೆಗೆ ಆಯೋಜನೆಗೊಳ್ಳಲಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯು ನವೆಂಬರ್ 26 ರಿಂದ ಡಿಸೆಂಬರ್ 18ರವರೆಗೆ ನಡೆಯುವುದು. ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯೂ ಡಿಸೆಂಬರ್ 7ರಿಂದ 2026ರ ಜನವರಿ 28ರವರೆಗೆ ಆಯೋಜನೆಯಾಗಿದೆ. 

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ತನ್ನ ಅಧಿಕೃತ ಜಾಲತಾಣ (ಬಿಸಿಸಿಐ ಡಾಟ್ ಟಿ.ವಿ)ದಲ್ಲಿ ದೇಶಿ ಕ್ರಿಕೆಟ್‌ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಿ ಋತುವು ಇದೇ 28ರಿಂದ ನಡೆಯುವ ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಆರಂಭವಾಗುವುದು. ಸೆಪ್ಟೆಂಬರ್ 15ರವರೆಗೆ ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಟೂರ್ನಿ ನಡೆಯುವುದು. 

ಅಕ್ಟೋಬರ್ 1ರಿಂದ 5ರವರೆಗೆ ನಾಗಪುರದಲ್ಲಿ ನಡೆಯಲಿರುವ ಇರಾನಿ ಟ್ರೋಫಿ ಪಂದ್ಯದಲ್ಲಿ ಹಾಲಿ ರಣಜಿ ಟ್ರೋಫಿ ವಿಜೇತ ತಂಡ ವಿದರ್ಭ ಮತ್ತು ರೆಸ್ಟ್ ಆಫ್ ಇಂಡಿಯಾ ತಂಡವು ಮುಖಾಮುಖಿಯಾಗಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.