ADVERTISEMENT

ರೋನಿತ್‌ ದಾಳಿಗೆ ಮುಂಬೈ ‘ಚಿತ್’

ರಣಜಿ: ಬೆಳಗಾವಿ ಆಟಗಾರನಿಗೆ ಕುಂದಾ ಸಿಹಿ; ಕರ್ನಾಟಕ ತಂಡಕ್ಕೆ ಒಟ್ಟು 276 ರನ್ ಮುನ್ನಡೆ

ಪ್ರಮೋದ ಜಿ.ಕೆ
Published 22 ನವೆಂಬರ್ 2018, 17:22 IST
Last Updated 22 ನವೆಂಬರ್ 2018, 17:22 IST
ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಗುರುವಾರ ಅಂಪೈರ್‌ಗೆ ಮನವಿ ಸಲ್ಲಿಸಿದ ಕರ್ನಾಟಕ ತಂಡದ ವೇಗದ ಬೌಲರ್‌ ರೋನಿತ್‌ ಮೋರೆ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್
ಬೆಳಗಾವಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಗುರುವಾರ ಅಂಪೈರ್‌ಗೆ ಮನವಿ ಸಲ್ಲಿಸಿದ ಕರ್ನಾಟಕ ತಂಡದ ವೇಗದ ಬೌಲರ್‌ ರೋನಿತ್‌ ಮೋರೆ –ಪ್ರಜಾವಾಣಿ ಚಿತ್ರ/ತಾಜುದ್ದೀನ್‌ ಆಜಾದ್   

ಬೆಳಗಾವಿ: ಕರ್ನಾಟಕ ತಂಡದಲ್ಲಿ ಅವ ಕಾಶ ಸಿಗದ ಕಾರಣ ಮೂರು ವರ್ಷಗಳ ಹಿಂದೆ ಹಿಮಾಚಲ ಪ್ರದೇಶ ತಂಡ ಸೇರಿದ್ದ ಕುಂದಾನಗರಿಯ ರೋನಿತ್‌ ಮೋರೆ ಗುರುವಾರ ತವರಿನಲ್ಲಿ ಹೀರೊ ಆಗಿ ಮೆರೆದಾಡಿದರು.

ಇವರು ಪಡೆದ ಪ್ರಮುಖ ಐದು ವಿಕೆಟ್‌ಗಳ ಬಲದಿಂದ ರಾಜ್ಯ ತಂಡ ಮುಂಬೈ ವಿರುದ್ಧದ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಸುಲಭವಾಗಿ ಇನಿಂಗ್ಸ್‌ ಮುನ್ನಡೆ ಸಾಧಿಸಿತು. ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 400 ರನ್ ಗಳಿಸಿತ್ತು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 85.5 ಓವರ್‌ಗಳಲ್ಲಿ 205 ರನ್ ಗಳಿಸಿ ಆಲೌಟ್‌ ಆಯಿತು.

ಮೊದಲ ಇನಿಂಗ್ಸ್‌ನಲ್ಲಿ ಪಡೆದ 195 ರನ್‌ಗಳ ಭರ್ಜರಿ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಗುರುವಾರದ ಆಟದ ಅಂತ್ಯಕ್ಕೆ 34 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 81 ರನ್ ಗಳಿಸಿದೆ. ಒಟ್ಟು ಮುನ್ನಡೆಯನ್ನು 276 ರನ್‌ಗೆ ಹೆಚ್ಚಿಸಿಕೊಂಡಿದೆ. ಎರಡನೇ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಹೊಸ ಚೆಂಡಿನೊಂದಿಗೆ ಬೌಲಿಂಗ್ ಆರಂಭಿಸಿದ ಮುಂಬೈ ಬೌಲರ್‌ಗಳು ಡಿ. ನಿಶ್ಚಲ್‌ (11), ಶಿಶಿರ್ ಭವಾನೆ (5) ಅವರನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು. ಮೂರನೇ ವಿಕೆಟ್‌ಗೆ ಮೀರ್‌ ಕೌನೇನ್‌ ಅಬ್ಬಾಸ್‌ ಮತ್ತು ಕೆ.ವಿ, ಸಿದ್ದಾರ್ಥ್‌ 56 ರನ್ ಕಲೆಹಾಕಿದರು.

ADVERTISEMENT

ಮಧ್ಯಮವೇಗಿಗಳ ಮುಂದೆ ನಡೆಯದ ಆಟ: ಬುಧವಾರದ ಅಂತ್ಯಕ್ಕೆ ಎರಡು ವಿಕೆಟ್‌ ನಷ್ಟಕ್ಕೆ 99 ರನ್ ಗಳಿಸಿದ್ದ ಮುಂಬೈ ಮೂರನೇ ದಿನ ಬೌಂಡರಿಯೊಂದಿಗೆ ಆಟ ಆರಂಭಿಸಿತು. ದಿನದಾಟದ ಮೂರನೇ ಓವರ್‌ನ ರೋನಿತ್ ಮೋರೆ ಬೌಲಿಂಗ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ನಾಲ್ಕು ಬೌಂಡರಿಗಳನ್ನು ಬಾರಿಸಿದರು.

ಪ್ರಸಿದ್ಧ ಎಂ. ಕೃಷ್ಣ 40ನೇ ಓವರ್‌ನಲ್ಲಿ ಜಯ್‌ ಬಿಸ್ತಾ ಅವರನ್ನು ಪೆವಿಲಿಯನ್‌ ಕಳುಹಿಸಿದರು. ನಂತರದ ಓವರ್‌ನಲ್ಲಿಯೇ ರೋನಿತ್‌ ಅವರು ಸೂರ್ಯಕುಮಾರ್‌ ವಿಕೆಟ್‌ ಕಬಳಿಸಿದರು.

ದಿಢೀರನೇ ಎರಡು ವಿಕೆಟ್‌ ಕಳೆದು ಕೊಂಡ ಮುಂಬೈ ತಂಡಕ್ಕೆ ಮೋರೆ ಮತ್ತೊಂದು ಆಘಾತ ನೀಡಿದರು. 45ನೇ ಓವರ್‌ನ ಐದನೇ ಎಸೆತದಲ್ಲಿ ಆದಿತ್ಯ ತಾರೆ ಬ್ಯಾಟಿನ ಅಂಚಿಗೆ ಸವರಿದ ಚೆಂಡು ವಿಕೆಟ್‌ ಕೀಪರ್‌ ಬಿ.ಆರ್. ಶರತ್‌ ಕೈಯಲ್ಲಿ ಭದ್ರವಾಗಿತ್ತು. ಮೂರು ರನ್ ಗಳಿಸುವ ಅಂತರದಲ್ಲಿ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಮುಂಬೈ ತತ್ತರಿಸಿತು.

ಭೋಜನ ವಿರಾಮದ ವೇಳೆಗೆ ಮುಂಬೈ 166 ರನ್‌ ಗಳಿಸುವಷ್ಟರಲ್ಲಿ ಒಟ್ಟು ಆರು ವಿಕೆಟ್‌ ಕಳೆದುಕೊಂಡಿತ್ತು. ವಿರಾಮದ ಬಳಿಕ ಒಂದೊಂದು ರನ್ ಗಳಿಸಲು ಕೂಡ ಪರದಾಡಿತು. ಕೊನೆಯ 39 ರನ್ ಕಲೆಹಾಕುವಷ್ಟರಲ್ಲಿ ನಾಲ್ಕು ವಿಕೆಟ್‌ ಪತನವಾದವು. ಇದರಲ್ಲಿ ಎರಡು ವಿಕೆಟ್‌ ರೋನಿತ್ ಕಬಳಿಸಿದರು.

ತವರಿನ ಖುಷಿ: ಬಾಲ್ಯದಿಂದ ರೋನಿತ್‌ ಬೆಳಗಾವಿ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಕ್ರಿಕೆಟ್‌ ತರಬೇತಿ ಪಡೆದವರು. ಇಲ್ಲಿಯೇ ಶಾಲಾ, ಕಾಲೇಜುಗಳ ಟೂರ್ನಿಗಳಲ್ಲಿ ಆಡಿ ದ್ದಾರೆ. ಒಟ್ಟು ಐದು ವಿಕೆಟ್‌ ಪಡೆದು ಹುಟ್ಟೂರಿನಲ್ಲಿ ಆಡಿದ ಮೊದಲ ರಣಜಿ ಪಂದ್ಯ ಸವಿನೆನಪಾಗಿ ಉಳಿಯುವಂತೆ ಮಾಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರೋನಿತ್‌ ಒಂದೇ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದಿದ್ದು ಇದು ಎರಡನೇ ಬಾರಿ.

ಇನ್ನೊಬ್ಬ ವೇಗಿ ಪ್ರಸಿದ್ಧ ಎಂ. ಕೃಷ್ಣ ಮತ್ತು ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿರುವ ಸ್ಪಿನ್ನರ್‌ ಶ್ರೇಯಸ್ ಗೋಪಾಲ್ ತಲಾ ಎರಡು ವಿಕೆಟ್‌ ಕಬಳಿಸಿದರು. ಇನ್ನೊಂದು ವಿಕೆಟ್‌ ವೇಗಿ ಅಭಿಮನ್ಯು ಮಿಥುನ್ ಪಾಲಾಯಿತು.

ಇದರಿಂದ ಮುಂಬೈ ತಂಡ ಫಾಲೊ ಆನ್‌ಗೆ ಸಿಲುಕಿತು. ಉತ್ತಮ ಆರಂಭ ದೊರಕಿಸಿಕೊಟ್ಟಿದ್ದ ಜಯ್‌ ಬಿಸ್ತಾ (70, 118 ಎಸೆತ, 11 ಬೌಂಡರಿ) ಔಟಾದ ಬಳಿಕ ತಂಡದ ‘ಪೆವಿಲಿಯನ್‌ ಪರೇಡ್‌’ ನಡೆಯಿತು. ಈ ತಂಡದವರು ಕೊನೆಯ 106 ರನ್‌ ಗಳಿಸುವಷ್ಟರಲ್ಲಿ ಎಂಟು ವಿಕೆಟ್‌ ಕಳೆದುಕೊಂಡಿದ್ದು ಇದಕ್ಕೆ ಸಾಕ್ಷಿ.

***
ತಂಡದಲ್ಲಿ ಸ್ಥಾನ ಸಿಗದೇ ಇದ್ದಾಗ ಸಾಕಷ್ಟು ಕಷ್ಟದ ಹಾದಿ ಸವೆಸಿದ್ದೇನೆ. ಆಗಿನ ಕಠಿಣ ಶ್ರಮಕ್ಕೆ ಈಗ ಫಲ ಲಭಿಸಿದೆ.
-ರೋನಿತ್‌ ಮೋರೆ, ಕರ್ನಾಟಕ ತಂಡದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.