ADVERTISEMENT

ರಣಜಿ ಟ್ರೋಫಿ | ಸ್ಮರಣ್–ಕರುಣ್ ಶತಕದ ಜೊತೆಯಾಟ; ಉತ್ತಮ ಮೊತ್ತ ಕಲೆ ಹಾಕಿದ ಕರ್ನಾಟಕ

ಸತೀಶ ಬಿ.
Published 17 ನವೆಂಬರ್ 2025, 0:45 IST
Last Updated 17 ನವೆಂಬರ್ 2025, 0:45 IST
   

ಹುಬ್ಬಳ್ಳಿ: ಸ್ಮರಣ್ ರವಿಚಂದ್ರನ್‌ ಮತ್ತು ಕರುಣ್ ನಾಯರ್ ಶತಕದ ಜೊತೆಯಾಟದಿಂದ ಕರ್ನಾಟಕ ತಂಡ ಭಾನುವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಚಂಡೀಗಢ ಎದುರು ಉತ್ತಮ ಮೊತ್ತ ಕಲೆ ಹಾಕಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡ ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿತು. 8 ಓವರ್‌ಗಳಲ್ಲಿ 13 ರನ್‌ ಆಗುವಷ್ಟರಲ್ಲಿ 2 ವಿಕೆಟ್ ಉರುಳಿದವು. ಈ ಹಂತದಲ್ಲಿ ನೆರವಿಗೆ ಬಂದ ಸ್ಮರಣ್‌ ಅಜೇಯ 110 ರನ್ ಗಳಿಸಿದರು. ಆದರೆ ಕರುಣ್ ಕೇವಲ ಐದು ರನ್‌ಗಳ ಅಂತರದಲ್ಲಿ ಶತಕದ ಗಡಿ ದಾಟುವುದನ್ನು ತಪ್ಪಿಸಿಕೊಂಡರು. ಇವರಿಬ್ಬರೂ ನಾಲ್ಕನೇ ವಿಕೆಟ್‌ಗೆ ಶತಕದ (119, 202 ಎ) ಜತೆಯಾಟವಾಡಿ ಕುಸಿತ ತಡೆದರು. ಇದರಿಂದಾಗಿ  ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 5 ವಿಕೆಟ್‌ ನಷ್ಟಕ್ಕೆ 298 ರನ್ ಗಳಿಸಿತು.  

ಅಮೋಘ ಲಯದಲ್ಲಿರುವ ಕರುಣ್‌ ತಾವೆದುರಿಸಿದ ಮೊದಲ ಎರಡು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿ, ಅಬ್ಬರಿಸುವ ಸೂಚನೆ ನೀಡಿದರು. 12 ರನ್‌ ಗಳಿಸಿದ್ದ ವೇಳೆ ರಾಜನಗಡ ಬಾವ ಕ್ಯಾಚ್‌ ಕೈಚೆಲ್ಲಿದ್ದರಿಂದ ಜೀವದಾನ ಪಡೆದರು. ಅವರು ಕವರ್‌ ಡ್ರೈವ್‌, ಕಟ್‌  ಮೂಲಕ ಬೌಂಡರಿ ಗಳಿಸಿದರು. ಲಾಂಗ್ ಆಫ್‌ಗೆ ಸಿಕ್ಸರ್‌ ಎತ್ತಿದರು. 

ADVERTISEMENT

ಕೇರಳ ಎದುರು ಅಜೇಯ ದ್ವಿಶತಕ (220) ಸಿಡಿಸಿದ್ದ ಸ್ಮರಣ್‌, ಇಲ್ಲಿ ಮತ್ತೆ ಮಿಂಚಿದರು. ಮೂರು ತಾಸು ಕ್ರೀಸ್‌ನಲ್ಲಿ ಬೇರೂರಿದ ಅವರು 184 ಎಸೆತಗಳನ್ನು ಎದುರಿಸಿ, 11 ಬೌಂಡರಿ, 1 ಸಿಕ್ಸರ್ ಬಾರಿಸಿದ್ದಾರೆ. 

ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ಮಯಂಕ್‌ (9) ನಿರಾಶೆ ಮೂಡಿಸಿದರು. ಅವರನ್ನು  ವೇಗಿ ಜಗಜೀತ್ ಸಿಂಗ್ ಸಂಧು ಏಳನೇ ಓವರ್‌ನಲ್ಲಿ ಬೌಲ್ಡ್‌ ಮಾಡಿದರು. ಮರು ಓವರ್‌ನಲ್ಲಿ ಆರಂಭಿಕ ಬ್ಯಾಟರ್‌ ಅನೀಶ್ ಕೆ.ವಿ (2) ಅವರು ಕೀಪರ್‌ ನಿಖಿಲ್ ಠಾಕೂರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಾಳ್ಮೆಯಿಂದ ಆಡುತ್ತಿದ್ದ ಕೆ.ಎಲ್‌.ಶ್ರೀಜಿತ್ (17, 53 ಎ) ಅವರನ್ನು ಎಡಗೈ ಸ್ಪಿನ್ನರ್‌ ನಿಶುಂಕ್ ಬಿರ್ಲಾ ಎಲ್‌ಬಿ ಬಲೆಗೆ ಕೆಡವಿದರು. ಅವರು ಕರುಣ್‌ ಜತೆ ಮೂರನೇ ವಿಕೆಟ್‌ ಜತೆಯಾಟದಲ್ಲಿ 51 ರನ್ (116 ಎಸೆತ) ಸೇರಿಸಿದರು.

ಚಹಾ ವಿರಾಮಕ್ಕೂ ಮುನ್ನ ಅಭಿನವ್ ಮನೋಹರ್‌ (11) ಅವರನ್ನು ನಿಶುಂಕ್‌ ಬೌಲ್ಡ್‌ ಮಾಡಿ ಸಂಭ್ರಮಿ ಸಿದರು. ದಿನದ ಕೊನೆಯ ಅವಧಿಯಲ್ಲಿ ಬೌಲರ್‌ಗಳಿಗೆ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಸ್ಮರಣ್‌ಗೆ ಮತ್ತು ಆಲ್‌ರೌಂಡರ್‌ ಶ್ರೇಯಸ್ (ಅಜೇಯ 38, 80 ಎ, 4X4)  ಆರನೇ ವಿಕೆಟ್ ಜತೆಯಾಟದಲ್ಲಿ 88 ರನ್‌ ಸೇರಿಸಿದ್ದು, ಸೋಮವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.   

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 90 ಓವರ್‌ಗಳಲ್ಲಿ 5ಕ್ಕೆ 298 (ಕರುಣ್ ನಾಯರ್ 95, ಸ್ಮರಣ್ ರವಿಚಂದ್ರನ್ ಔಟಾಗದೇ 110, ಶ್ರೇಯಸ್ ಗೋಪಾಲ್ ಔಟಾಗದೇ 38; ನಿಶುಂಕ್ ಬಿರ್ಲಾ 85ಕ್ಕೆ 2, ರಾಜನಗಡ ಬಾವಾ 41ಕ್ಕೆ 1) ವಿರುದ್ಧ ಚಂಡೀಗಢ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.