
ಲಖನೌ: ನಾಯಕ ದೇವದತ್ತ ಪಡಿಕ್ಕಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ದ್ವಿಶತಕ ದಾಖಲಿಸಿದರು. ಸ್ಮರಣ್ ರವಿಚಂದ್ರನ್ ಅಜೇಯ ಶತಕ ಗಳಿಸಿದರು. ಇದರೊಂದಿಗೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಸತತ ಎರಡನೇ ದಿನವೂ ಕರ್ನಾಟಕ ಪಾರಮ್ಯ ಮೆರೆದು ರನ್‌ಗಳ ಬೆಟ್ಟವನ್ನೇ ನಿರ್ಮಿಸಿದೆ.
ಪಂದ್ಯದ ಮೊದಲ ದಿನವಾದ ಭಾನುವಾರ ಶತಕ ಗಳಿಸಿ ಕ್ರೀಸ್‌ನಲ್ಲಿದ್ದ ದೇವದತ್ತ ಎರಡನೇ ದಿನದಾಟದಲ್ಲಿ ದ್ವಿಶತಕದ ಗಡಿ ದಾಟಿದರು. ದೇವದತ್ತ (232; 330ಎ, 4X29, 6X3) ಮತ್ತು ಸ್ಮರಣ್ (ಬ್ಯಾಟಿಂಗ್ 121, 191ಎ, 4X11) ಅವರ ಚೆಂದದ ಬ್ಯಾಟಿಂಗ್‌ನಿಂದ ಕರ್ನಾಟಕವು ಸೋಮವಾರ ದಿನದಾಟದ ಅಂತ್ಯಕ್ಕೆ 180 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 689 ರನ್ ಗಳಿಸಿದೆ. ಸ್ಮರಣ್ ಮತ್ತು ವಿದ್ಯಾಧರ್ ಪಾಟೀಲ (ಬ್ಯಾಟಿಂಗ್ 35; 107ಎ) ಕ್ರೀಸ್‌ನಲ್ಲಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಕ್ರೀಸ್‌ನಲ್ಲಿದ್ದ ಕರ್ನಾಟಕವು 2 ವಿಕೆಟ್‌ಗಳಿಗೆ 355 ರನ್ ಗಳಿಸಿತ್ತು.
ಪಡಿಕ್ಕಲ್ (ಔಟಾಗದೇ 148) ಮತ್ತು ಕರುಣ್ (60; 105ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 129 ರನ್ ಸೇರಿಸಿದರು. ಉತ್ತರಾಖಂಡದ ಮಧ್ಯಮವೇಗಿ ಅಭಯ್ ನೇಗಿ ಲೆಂಗ್ತ್ ಎಸೆತದಲ್ಲಿ ಕರುಣ್ ಅವರು ವಿಕೆಟ್‌ಕೀಪರ್ ಸೌರಭ್ ರಾವತ್‌ಗೆ ಕ್ಯಾಚ್ ಆದರು. ಇದರೊಂದಿಗೆ ಜೊತೆಯಾಟ ಮುರಿಯಿತು.
ದೇವದತ್ತ ಅವರ ಏಕಾಗ್ರಚಿತ್ತ ಆಟ ಮುಂದುವರಿಯಿತು. ತಮ್ಮ ಮೊದಲ ದ್ವಿಶತಕ ಮುಟ್ಟಲು 288 ಎಸೆತ ಎದುರಿಸಿದರು. ಅವರಿಗೆ ಸ್ಮರಣ್ ಕೂಡ ಉತ್ತಮ ಜೊತೆ ನೀಡಿದರು. ಇಬ್ಬರ ಜೊತೆಯಾಟದಲ್ಲಿ 59 ರನ್‌ಗಳು ಸೇರಿದವು.
ಲಕ್ಷ್ಯ ರಾಯಚಂದಾನಿ ಅವರ ಎಸೆತವನ್ನು ಫೈನ್ ಲೆಗ್ ಬೌಂಡರಿಯತ್ತ ಹೊಡೆಯಲು ಯತ್ನಿಸಿದ ದೇವದತ್ತ ವಿಕೆಟ್‌ಕೀಪರ್ ಸೌರಭ್‌ಗೆ ಕ್ಯಾಚ್ ಕೊಟ್ಟರು. ಅಮೋಘ ಇನಿಂಗ್ಸ್‌ಗೆ ತೆರೆಬಿತ್ತು. ಕ್ರೀಸ್‌ಗೆ ಬಂದ ಶ್ರೇಯಸ್ ಗೋಪಾಲ್ ಅವರು ಆರು ಎಸೆತ ಆಡಿ ಖಾತೆ ತೆರೆಯದೇ ಔಟಾದರು. ಆದಿತ್ಯ ರಾವತ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಆಗ ತಂಡದ ಮೊತ್ತವು (5ಕ್ಕೆ485) ಐದನೂರರ ಗಡಿ ದಾಟಿರಲಿಲ್ಲ.
ಈ ಹಂತದಲ್ಲಿ ಸ್ಮರಣ್ ಅವರ ಆಟದ ಸೊಬಗೂ ಮತ್ತಷ್ಟು ವಿಸ್ತರಿಸಿತು. 150 ಎಸೆತಗಳಲ್ಲಿ ಶತಕ ಹೊಡೆದರು. ಈ ಇನಿಂಗ್ಸ್‌ನಲ್ಲಿ ದಾಖಲಾದ ಮೂರನೇ ಶತಕ ಇದಾಯಿತು. ಭಾನುವಾರ ಕೆ.ಎಲ್. ರಾಹುಲ್ ಕೂಡ 141 ರನ್ ಹೊಡೆದಿದ್ದರು.
ಸ್ಮರಣ್ ಅವರಿಗೆ ಕೃತಿಕ್ ಕೃಷ್ಣ (60; 103ಎ) ಉತ್ತಮ ಜೊತೆ ನೀಡಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 123 ರನ್ ಸೇರಿಸಿದರು. ಕೃತಿಕ್ ಆರು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು. ಆಫ್‌ಸ್ಪಿನ್ನರ್ ಅವನೀಶ್ ಸುಧಾ ಎಸೆತದಲ್ಲಿ ಕೃತಿಕ್ ಕ್ಲೀನ್‌ಬೌಲ್ಡ್ ಆದರು. ಆದರೂ ಉತ್ತರಾಖಂಡದ ಸಂಕಷ್ಟ ಮುಂದುವರಿಯಿತು. ಸ್ಮರಣ್ ಜೊತೆಗೂಡಿದ ವಿದ್ಯಾಧರ್ ಒಟ್ಟು 81 ರನ್ ಕಲೆಹಾಕಿದರು.
ಸಂಕ್ಷಿಪ್ತ ಸ್ಕೋರು: ಕರ್ನಾಟಕ: 180 ಓವರ್‌ಗಳಲ್ಲಿ 6ಕ್ಕೆ689 (ದೇವದತ್ತ ಪಡಿಕ್ಕಲ್ 232, ಕರುಣ್ ನಾಯರ್ 60, ಆರ್. ಸ್ಮರಣ್ ಬ್ಯಾಟಿಂಗ್ 121, ಕೃತಿಕ್ ಕೃಷ್ಣ 60, ವಿದ್ಯಾಧರ್ ಪಾಟೀಲ ಬ್ಯಾಟಿಂಗ್ 35, ಆದಿತ್ಯ ರಾವತ್ 132ಕ್ಕೆ3, ಅವನೀಶ್ ಸುಧಾ 107ಕ್ಕೆ1, ಲಕ್ಷ್ಯ ರಾಯಚಂದಾನಿ 25ಕ್ಕೆ1, ಅಭಯ್ ನೇಗಿ 99ಕ್ಕೆ1) ವಿರುದ್ಧ ಉತ್ತರಾಖಂಡ.
ಶಮಿ ಮುಕೇಶ್ ಮಿಂಚು
ಕಲ್ಯಾಣಿ (ಬಂಗಾಳ): ಅನುಭವಿ ವೇಗಿ ಮೊಹಮ್ಮದ್ ಶಮಿ (60ಕ್ಕೆ3) ಮತ್ತು ಮುಕೇಶ್ ಕುಮಾರ್ (40ಕ್ಕೆ2) ಅವರ ಉತ್ತಮ ಬೌಲಿಂಗ್‌ನಿಂದಾಗಿ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಜಮ್ಮು–ಕಾಶ್ಮೀರ ತಂಡವು ಮೊದಲ ಇನಿಂಗ್ಸ್ ಹಿನ್ನಡೆಯ ಆತಂಕ ಎದುರಿಸುತ್ತಿದೆ. ಸುದೀಪ್ ಕುಮಾರ್ ಘರಾಮಿ (146; 246ಎ 21ಎ 4X1) ಅವರ ಶತಕದ ಬಲದಿಂದ ಆತಿಥೇಯ ಬಂಗಾಳ ತಂಡವು 97.1 ಓವರ್‌ಗಳಲ್ಲಿ 328 ರನ್ ಗಳಿಸಿತು. ಕಾಶ್ಮೀರದ ಅಕೀಬ್ ನಬಿ (87ಕ್ಕೆ5) ಮತ್ತೊಮ್ಮೆ ಐದು ವಿಕೆಟ್ ಗುಚ್ಛ ಗಳಿಸಿದರು. ಇನಿಂಗ್ಸ್ ಆರಂಭಿಸಿದ ಕಾಶ್ಮೀರ ತಂಡದ ಆರಂಭ ಉತ್ತಮವಾಗಿರಲಿಲ್ಲ. ಶಮಿ (60ಕ್ಕೆ3) ಮತ್ತು ಮುಕೇಶ್ (40ಕ್ಕೆ2) ಅವರ ಉತ್ತಮ ಬೌಲಿಂಗ್ ಮುಂದೆ ಕೇವಲ 13 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ನಾಯಕ ಪಾರಸ್ ಡೋಗ್ರಾ (58; 112ಎ) ಮತ್ತು ಅಬ್ದುಲ್ ಸಮದ್ (82; 85ಎ) ಅವರು ತಂಡಕ್ಕೆ ಆಸರೆಯಾದರು. ಆದರೆ ಮುಕೇಶ್ ಮತ್ತು ಶಮಿ ಕ್ರಮವಾಗಿ ಡೋಗ್ರಾ ಮತ್ತು ಸಮದ್ ವಿಕೆಟ್ ಕಬಳಿಸಿದರು. ದಿನದಾಟದ ಅಂತ್ಯಕ್ಕೆ ಕಾಶ್ಮೀರ ತಂಡವು 51 ಓವರ್‌ಗಳಲ್ಲಿ 5 ವಿಕೆಟ್ ಗಳಿಗೆ 198 ರನ್ ಗಳಿಸಿತು. ಅಬಿದ್ ಮುಷ್ತಾಕ್ (ಬ್ಯಾಟಿಂಗ್ 26) ಮತ್ತು ಕನಯ್ಯಾ ವಾಧ್ವಾನ್ (ಬ್ಯಾಟಿಂಗ್ 10) ಕ್ರೀಸ್‌ನಲ್ಲಿದ್ದಾರೆ. ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಬಂಗಾಳ: 328 (ಸುದೀಪ್ ಕುಮಾರ್ ಘರಾಮಿ 146 ಸುಮಂತ್ ಗುಪ್ತಾ 39 ಅಕೀಬ್ ನಬಿ 87ಕ್ಕೆ5 ಸುನಿಲ್ ಕುಮಾರ್ 41ಕ್ಕೆ3) ಜಮ್ಮು–ಕಾಶ್ಮೀರ: 51 ಓವರ್‌ಗಳಲ್ಲಿ 5ಕ್ಕೆ198 (ಪಾರಸ್ ಡೋಗ್ರಾ 58 ಅಬ್ದುಲ್ ಸಮದ್ 82 ಅಬಿದ್ ಮುಷ್ತಾಕ್ 26 ಮೊಹಮ್ಮದ್ ಶಮಿ 60ಕ್ಕೆ3 ಮುಕೇಶ್ ಕುಮಾರ್ 40ಕ್ಕೆ2)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.