
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ದೇಶಿ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿರುವ ನಾಗಾಲ್ಯಾಂಡ್ ತಂಡವು ಬಲಾಢ್ಯ ತಮಿಳುನಾಡು ಎದುರು ದಿಟ್ಟ ಆಟವಾಡಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಇದರೊಂದಿಗೆ ಎದುರಾಳಿ ತಂಡದ ಆಟಗಾರರೂ ಸೇರಿದಂತೆ ಹಲವರ ಮನ ಗೆಲ್ಲುವಲ್ಲಿ ನಾಗಾಲ್ಯಾಂಡ್ ಯಶಸ್ವಿಯಾಯಿತು.
ಮಂಗಳವಾರ ಮುಕ್ತಾಯವಾದ ಈ ಹಣಾಹಣಿಯಲ್ಲಿ ತಮಿಳುನಾಡು ತಂಡದ ಪ್ರದೋಷ್ ಪಾಲ್ (ಔಟಾಗದೇ 201; 314ಎ) ಅವರು ತಮಗೆ ಲಭಿಸಿದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನಾಗಾಲ್ಯಾಂಡ್‌ನ ಇಮ್ಲಾವತಿ ಲೆಮತೂರ್ (146; 287ಎ, 4X20, 6X3) ಅವರಿಗೆ ನೀಡಿದರು. ಪ್ರದೋಷ್ ಅವರ ನಡೆಯು ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ತಮಿಳುನಾಡು ತಂಡವು ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳಿಗೆ 512 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ನಾಗಾಲ್ಯಾಂಡ್ 157.4 ಓವರ್‌ಗಳಲ್ಲಿ 446 ರನ್ ಗಳಿಸಿತು. ತಮಿಳುನಾಡು ತಂಡದ ಅನುಭವಿ ಬೌಲರ್‌ಗಳಾದ ಗುರ್ಜಪನೀತ್ ಸಿಂಗ್ (75ಕ್ಕೆ4), ಚಂದ್ರಶೇಖರ್ (69ಕ್ಕೆ3) ಅವರ ಬೌಲಿಂಗ್ ಎದುರಿಸಿ ನಿಂತ ಇಮ್ಲಾವತಿ ತಂಡವು ದೀರ್ಘ ಇನಿಂಗ್ಸ್ ಆಡಲು ಕಾರಣರಾದರು. ಅವರಿಗೆ ಯುಗಂಧರ್ ಸಿಂಗ್ (67; 180ಎ) ಉತ್ತಮ ಜೊತೆ ನೀಡಿದರು.
ಇಮ್ಲಾವತಿ ಮತ್ತು ಕನ್ನಡಿಗ ಡೆಗಾ ನಿಶ್ಚಲ್ ಅವರು 6ನೇ ವಿಕೆಟ್ ಜೊತೆಯಾಟದಲ್ಲಿ 230 ರನ್ ಸೇರಿಸಿದರು. ಇದರಿಂದಾಗಿ ತಮಿಳುನಾಡು ತಂಡಕ್ಕೆ ಜಯದ ಅವಕಾಶ ಸಿಗಲಿಲ್ಲ.
ನಗರದ ಹೊರವಲಯದಲ್ಲಿರುವ ಬಿಸಿಸಿಐ–ಸಿಒಇ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಡ್ರಾ ಆಯಿತು. ತಮಿಳುನಾಡು ಮೂರು ಮತ್ತು ನಾಗಾಲ್ಯಾಂಡ್ ಒಂದು ಅಂಕ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.