ADVERTISEMENT

ವಿಜಯ್‌ ಹಜಾರೆ ಟ್ರೋಫಿ ಸೆಮಿಗೆ ವಿದರ್ಭ

86 ರನ್ ಬಾರಿಸಿದ ಯಶ್ ರಾಥೋಡ್‌, ನಾಲ್ಕು ವಿಕೆಟ್‌ ಪಡೆದ ನಚಿಕೇತ್ ಭೂತೆ

ಪಿಟಿಐ
Published 13 ಜನವರಿ 2026, 13:59 IST
Last Updated 13 ಜನವರಿ 2026, 13:59 IST
<div class="paragraphs"><p>ಕ್ರಿಕೆಟ್ </p></div>

ಕ್ರಿಕೆಟ್

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಶಿಸ್ತುಬದ್ಧ ಆಲ್‌ರೌಂಡ್‌ ಆಟವಾಡಿದ ಕಳೆದ ಬಾರಿಯ ರನ್ನರ್ ಅಪ್ ವಿದರ್ಭ ತಂಡ ಮಂಗಳವಾರ 76 ರನ್‌ಗಳಿಂದ ದೆಹಲಿ ತಂಡವನ್ನು ಮಣಿಸಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿತು.

ADVERTISEMENT

ವಿದರ್ಭ ತಂಡ ಗುರುವಾರ ನಡೆಯುವ ಸೆಮಿಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವನ್ನು ಎದುರಿಸಲಿದೆ.

ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ 9 ವಿಕೆಟ್‌ಗೆ 300 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಮಧ್ಯಮ ಕ್ರಮಾಂಕದ ಆಟಗಾರ ಯಶ್ ರಾಥೋಡ್ 86 ರನ್ ಗಳಿಸಿದರೆ, ಆರಂಭ ಆಟಗಾರ ಅಥರ್ವ ತೈಡೆ 62 ರನ್ (72ಎ, 4x8) ಬಾರಿಸಿ ಸತತ ಎರಡನೇ ಅರ್ಧ ಶತಕ ದಾಖಲಿಸಿದರು.

‘ರಾಷ್ಟ್ರೀಯ ಕರ್ತವ್ಯ’ಕ್ಕೆ ತೆರಳಿರುವ ಆಯುಷ್‌ ಬಡೋನಿ ಮತ್ತು ಗಾಯಾಳು ರಿಷಭ್ ಪಂತ್ ಅವರಿಲ್ಲದೇ ಆಡಿದ ದೆಹಲಿ ತಂಡ 45.1 ಓವರುಗಳಲ್ಲಿ 224 ರನ್‌ಗಳಿಗೆ ಆಲೌಟ್‌ ಆಯಿತು. ಗಾಯಾಳು ವಾಷಿಂಗ್ಟನ್ ಸುಂದರ್ ಬದಲು ಬಡೋನಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಆಡುವ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವೇಗದ ಬೌಲರ್ ನಚಿಕೇತ್ ಭೂತೆ (51ಕ್ಕೆ4) ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆ (36ಕ್ಕೆ3) ಅವರು ದೆಹಲಿ ಕುಸಿತಕ್ಕೆ ಕಾರಣರಾದರು.

ಆರನೇ ಕ್ರಮಾಂಕದಲ್ಲಿ ಆಡಿದ ವಿಕೆಟ್‌ ಕೀಪರ್–ಬ್ಯಾಟರ್ ಅನುಜ್ ರಾವತ್ ಅವರು ದೆಹಲಿ ಪರ ಏಕಾಂಗಿಯಾಗಿ ಹೋರಾಡಿ ತಾಳ್ಮೆಯ 66 ರನ್ (98 ಎಸೆತ, 4x7) ಹೊಡೆದರು. 

ಇದಕ್ಕೆ ಮೊದಲು ವೈಭವ ಕಂದಪಾಲ್ (28, 42ಎ) ಮತ್ತು ಪ್ರಿಯಾಂಶ್ ಆರ್ಯ (28, 17ಎ 4x4, 6x1) ಅವರು 7.5 ಓವರುಗಳಲ್ಲಿ 58 ರನ್ ಸೇರಿಸುವ ಮೂಲಕ ದೆಹಲಿಗೆ ಉತ್ತಮ ಆರಂಭ ನೀಡಿದ್ದರು. ಆದರೆ ನಾಯಕ ದುಬೆ ದಾಳಿಗೆ ಮಧ್ಯಮ ಕ್ರಮಾಂಕ ಕುಸಿದು ವಿದರ್ಭ ಮೇಲುಗೈ ಸಾಧಿಸಿತು.

ಇದಕ್ಕೆ ಮೊದಲು ವಿದರ್ಭ ತಂಡವು ಅಮನ್ ಮೋಖಡೆ (6) ಅವರನ್ನು ಬೇಗ ಕಳೆದುಕೊಂಡರೂ ತೈಡೆ ಮತ್ತು ಧ್ರುವ್ ಶೋರೆ (49, 71ಎ) ಎರಡನೇ ವಿಕೆಟ್‌ಗೆ 90 ರನ್ ಸೇರಿಸಿ ಚೇತರಿಕೆ ನೀಡಿದರು. ತೈಡೆ, ಅನುಭವಿ ಬೌಲರ್ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಇದು ಇಶಾಂತ್ ಅವರಿಗೆ ಲಿಸ್ಟ್‌ ಎ ಪಂದ್ಯಗಳಲ್ಲಿ 200ನೇ ವಿಕೆಟ್‌. ರಾಥೋಡ್ ನಂತರ ಕೆಳಕ್ರಮಾಂಕದ ಆಟಗಾರರ ನೆರವಿನಿಂದ ತಂಡ 300 ರನ್ ತಲುಪಲು ನೆರವಾದರು. 

ಸಂಕ್ಷಿಪ್ತ ಸ್ಕೋರು:

ವಿದರ್ಭ: 50 ಓವರುಗಳಲ್ಲಿ 9ಕ್ಕೆ 300 (ಯಶ್ ರಾಥೋಡ್‌ 86, ಅಥರ್ವ ತೈಡೆ 62, ಧ್ರುವ್ ಶೋರೆ 49; ಇಶಾಂತ್ ಶರ್ಮಾ 47ಕ್ಕೆ2, ಪ್ರಿನ್ಸ್‌ ಯಾದವ್‌ 59ಕ್ಕೆ2, ನವದೀಪ್ ಸೈನಿ 68ಕ್ಕೆ2, ನಿತೀಶ್ ರಾಣಾ 19ಕ್ಕೆ2)

ದೆಹಲಿ: 45.1 ಓವರುಗಳಲ್ಲಿ 224 (ಅನುಜ್ ರಾವತ್ 66, ನಚಿಕೇತ್ ಭೂತೆ 51ಕ್ಕೆ4, ಹರ್ಷ್ ದುಬೆ 36ಕ್ಕೆ3, ಪ್ರಫುಲ್‌ ಹಿಂಜೆ 54ಕ್ಕೆ2). ಪಂದ್ಯದ ಆಟಗಾರ: ಯಶ್ ರಾಥೋಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.