ADVERTISEMENT

ಐಪಿಎಲ್-2026: ರಾಯಪುರ, ನವಿ ಮುಂಬೈನಲ್ಲಿ ಆರ್‌ಸಿಬಿ ಪಂದ್ಯಗಳು ನಡೆಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 1:08 IST
Last Updated 15 ಜನವರಿ 2026, 1:08 IST
<div class="paragraphs"><p>ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರಿಗೆ ಜೆರ್ಸಿ ಕಾಣಿಕೆ ನೀಡಿದ ಆರ್‌ಸಿಬಿ ಸಿಒಒ ರಾಜೇಶ್ ಮೆನನ್</p></div>

ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರಿಗೆ ಜೆರ್ಸಿ ಕಾಣಿಕೆ ನೀಡಿದ ಆರ್‌ಸಿಬಿ ಸಿಒಒ ರಾಜೇಶ್ ಮೆನನ್

   

   –ಎಕ್ಸ್‌ ಚಿತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ 19ನೇ ಆವೃತ್ತಿಯು ಮಾರ್ಚ್‌ 26ರಿಂದ ಆರಂಭವಾಗಲಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರಿನ ಪಂದ್ಯಗಳನ್ನು ರಾಯಪುರ ಮತ್ತು ನವೀ ಮುಂಬೈನಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. 

ADVERTISEMENT

ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಆರ್‌ಸಿಬಿಗೆ ತವರಿನ ಅಂಗಳ. ಆದರೆ ರಾಜ್ಯ ಸರ್ಕಾರವು ಇಲ್ಲಿ ಪಂದ್ಯ ನಡೆಸಲು ಅನುಮತಿ ನೀಡುವುದು ಖಚಿತವಾಗಿಲ್ಲದ ಕಾರಣ ಬೇರೆ ನಗರಗಳತ್ತ ಆರ್‌ಸಿಬಿ ಮುಖ ಮಾಡಿದೆ ಎನ್ನಲಾಗಿದೆ. ಈಚೆಗಷ್ಟೇ ಪುಣೆಗೂ ತೆರಳಿದ್ದ ಆರ್‌ಸಿಬಿ ನಿಯೋಗವು ಕ್ರೀಡಾಂಗಣ ಪರಿಶೀಲನೆ ಮಾಡಿತ್ತು. ಆದರೆ ಬುಧವಾರ ಛತ್ತೀಸಗಡದ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರನ್ನು ರಾಯಪುರದಲ್ಲಿ ಭೇಟಿ ಮಾಡಿದ ಆರ್‌ಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಮಾತುಕತೆ ನಡೆಸಿದರು. ಆರ್‌ಸಿಬಿ ಜೆರ್ಸಿಯನ್ನೂ ಕಾಣಿಕೆಯಾಗಿ ನೀಡಿದರು. 

‘ರಾಜೇಶ್ ಮೆನನ್ ಅವರು ನನ್ನನ್ನು ಭೇಟಿಯಾಗಿದ್ದರು. ಅವರೊಂದಿಗೆ ಮಾತುಕತೆ ನಡೆಸಲಾಯಿತು’ ಎಂದು ಸಾಯಿ ಅವರು ಎಕ್ಸ್‌ನಲ್ಲಿ ಚಿತ್ರಸಹಿತ ಸಂದೇಶ ಹಾಕಿದ್ದಾರೆ. 

ತಂಡವು ಪ್ರತಿ ವರ್ಷ ತನ್ನ ತವರಿನಂಗಳದಲ್ಲಿ ಏಳು ಪಂದ್ಯಗಳನ್ನು ಆಯೋಜಿಸುವುದು ವಾಡಿಕೆ.  ಆದ್ದರಿಂದ ಎರಡು ರಾಯಪುರದಲ್ಲಿ ನಡೆದರೆ, ಇನ್ನೂ ಐದು ಪಂದ್ಯಗಳು ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕೆಲವು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿವೆ. 

ಕೆಎಸ್‌ಸಿಎ ಸಭೆ: ಈ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರವು ರಚಿಸಿರುವ ಪರಿಶೀಲನಾ ಸಮಿತಿಯಿಂದ ಅನುಮತಿ ಪಡೆಯಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಯತ್ನ ಮುಂದುವರಿಸಿದೆ.

ಕಳೆದ ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣ ನಡೆದಿತ್ತು. ಅದರಲ್ಲಿ 11 ಜನ ಅಭಿಮಾನಿಗಳು ಸಾವಿಗೀಡಾಗಿದ್ದರು. ಅದರ ನಂತರದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಮೈಕೆಲ್ ಡಿಕುನ್ಹಾ ಸಮಿತಿಯು ಕ್ರೀಡಾಂಗಣದಲ್ಲಿ ಕೆಲವು ಬದಲಾವಣೆಗಳನ್ನು ಶಿಫಾರಸು ಮಾಡಿತ್ತು.

‘ಕ್ರೀಡಾಂಗಣದಲ್ಲಿ ಇವತ್ತು ಪರಿಶೀಲನಾ ಸಮಿತಿಯೊಂದಿಗೆ ಸಭೆ ನಡೆಸಲಾಯಿತು. ಸರ್ಕಾರದ ಶಿಫಾರಸುಗಳ ಮೇರೆಗೆ ಕೆಲವು ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅವುಗಳನ್ನು ಸಮಿತಿಯು ಪರಿಶೀಲಿಸಿತು.  ಅದರ ಆಧಾರದಲ್ಲಿ ಸಮಿತಿಯು ಪಂದ್ಯಗಳನ್ನು ಆಯೋಜಿಸಲು ಹಸಿರು ನಿಶಾನೆ ನೀಡಿದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ‘ಪ್ರಜಾವಾಣಿ’ಗೆ ತಿಳಿಸಿದರು. 

 ಬೇರೆ ಫ್ರ್ಯಾಂಚೈಸಿಗಳ ಪಂದ್ಯ?

ಒಂದೊಮ್ಮೆ ಸರ್ಕಾರವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಿದರೂ ಆರ್‌ಸಿಬಿಯು ಇಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಆದ್ದರಿಂದ ಬೇರೆ ಫ್ರ್ಯಾಂಚೈಸಿಗಳ ಪಂದ್ಯಗಳನ್ನು ಇಲ್ಲಿ ಆಯೋಜಿಸುವ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಐಪಿಎಲ್‌ನಲ್ಲಿ ಆಡುವ ಕೆಲವು ತಂಡಗಳು ತಮ್ಮ ಎರಡನೇ ತವರಾಗಿ ಬೇರೆ ಊರಿನ ತಾಣಗಳಲ್ಲಿ ಆಡುತ್ತವೆ.  ಅಂತಹ ತಂಡಗಳನ್ನು ಆಹ್ವಾನಿಸಲು ಕೆಎಸ್‌ಸಿಎ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.