
ಬೆಂಗಳೂರು: ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕಿ ಸ್ಮೃತಿ ಮಂದಾನ ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್ ಅಲೀಸ್ ಪೆರಿ ಅವರನ್ನು ಉಳಿಸಿಕೊಂಡಿದೆ.
ಗುರುವಾರ ಉಳಿಕೆ ಆಟಗಾರರ ಪಟ್ಟಿ ಪ್ರಕಟಿಸಿರುವ ತಂಡವು ಆಫ್‌ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಹಾಗೂ ವಿಕೆಟ್‌ಕೀಪರ್ ರಿಚಾ ಘೋಷ್ ಅವರನ್ನೂ ಉಳಿಸಿಕೊಂಡಿದೆ.
2024ರಲ್ಲಿ ಪ್ರಶಸ್ತಿ ಜಯಿಸಿದ್ದ ಆರ್‌ಸಿಬಿ ತಂಡಕ್ಕೆ ಸ್ಮೃತಿ ನಾಯಕಿಯಾಗಿದ್ದರು. ಸ್ಮೃತಿ ಅವರಿಗೆ ಗರಿಷ್ಠ ಮೌಲ್ಯ (₹ 3.5 ಕೋಟಿ) ನೀಡಿ ಉಳಿಸಿಕೊಳ್ಳಲಾಗಿದೆ. ಅವರು ಆರ್‌ಸಿಬಿ ನಾಯಕಿಯಾಗಿ ಮುಂದುವರಿಯುವರು.
ಈಚೆಗೆ ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ಜಯಿಸುವಲ್ಲಿ ಸ್ಮೃತಿ ಪ್ರಮುಖ ಪಾತ್ರ ವಹಿಸಿದ್ದರು. ಅವರು 434 ರನ್ ಗಳಿಸಿದ್ದರು.
ರಿಚಾ ಘೋಷ್ (₹2.75 ಕೋಟಿ), ಅಲಿಸಾ ಪೆರಿ (₹ 2 ಕೋಟಿ) ಮತ್ತು ಶ್ರೇಯಂಕಾ (₹ 60 ಲಕ್ಷ) ಅವರನ್ನು ಉಳಿಸಿಕೊಳ್ಳಲಾಗಿದೆ. ಆಟಗಾರ್ತಿಯರನ್ನು ರಿಟೇನ್ ಮಾಡಿಕೊಳ್ಳಲು ಆರ್‌ಸಿಬಿಯು ₹ 8.85 ಕೋಟಿ ಖರ್ಚು ಮಾಡಿದೆ. ಸದ್ಯ ತನ್ನ ಪರ್ಸ್‌ನಲ್ಲಿರುವ ₹ 6.15 ಕೋಟಿಯನ್ನು ಹರಾಜು ಪ್ರಕ್ರಿಯೆಯಲ್ಲಿ ವಿನಿಯೋಗಿಸಲಿದೆ
ಮುಖ್ಯ ಕೋಚ್ ನೇಮಕ: ಆರ್‌ಸಿಬಿ ತಂಡದ ಮುಖ್ಯ ಕೋಚ್ ಆಗಿ ಮಲೋಳನ್ ರಂಗರಾಜನ್ ಅವರನ್ನು ನೇಮಕ ಮಾಡಲಾಗಿದೆ. ಅವರು ಕಳೆದ ಎರಡು ಋತುಗಳಲ್ಲಿ ಸಹಾಯಕ ಕೋಚ್ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.