ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಆವೃತ್ತಿಗೆ ತನ್ನ ನಾಯಕನನ್ನು ಗುರುವಾರ ಘೋಷಿಸಲಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ್ ಅವರ ಹೆಸರು ಮುಂಚೂಣಿಯಲ್ಲಿದೆ.
2013 ಮತ್ತು 2021ರ ನಡುವೆ ಕೊಹ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು. 2022ರಿಂದ 2024ರವರೆಗೆ ದಕ್ಷಿಣ ಆಫ್ರಿಕಾದ ಫಫ್ ಡುಪ್ಲೆಸ್ ತಂಡದ ಸಾರಥ್ಯ ವಹಿಸಿದ್ದರು.
ಮೆಗಾ ಹರಾಜಿಗೆ ಮುಂಚಿತವಾಗಿ ಡುಪ್ಲೆಸ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿತು. 40 ವರ್ಷ ವಯಸ್ಸಿನ ಅವರು ಈ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕೆ ಇಳಿಯುವರು.
ಆರ್‌ಸಿಬಿ ನಾಯಕನಾಗಿ ಕೊಹ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ, ತಂಡಕ್ಕೆ ಈವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. 36 ವರ್ಷ ವಯಸ್ಸಿನ ಕೊಹ್ಲಿ 143 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್‌ನ ಎಂ.ಎಸ್. ಧೋನಿ ನಂತರ ಅತಿ ಹೆಚ್ಚಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ.
ಹರಾಜಿಗೆ ಮುಂಚಿತವಾಗಿ ಆರ್‌ಸಿಬಿ ರಿಟೇನ್ ಮಾಡಿಕೊಂಡ ಆಟಗಾರರಲ್ಲಿ 31 ವರ್ಷ ವಯಸ್ಸಿನ ಪಾಟೀದಾರ್ ಕೂಡ ಒಬ್ಬರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶವನ್ನು ಮುನ್ನಡೆಸಿದ ಅನುಭವವನ್ನು ಅವರು ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.