
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಇನ್ನಷ್ಟು ಕಾಲ ಕಾಯಬೇಕಾಗಬಹುದೇ?
ಈ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಆರ್‌ಸಿಬಿಯು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದೆ. ಅದಕ್ಕಾಗಿಯೇ ಪುಣೆಯ ಗಹುಂಜೆಯಲ್ಲಿರುವ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ಜೊತೆಗೆ ಆರ್‌ಸಿಬಿಯು ಮಾತುಕತೆ ನಡೆಸಿದೆ. ಅಲ್ಲದೇ ತಂಡದ ನಿಯೋಗವು ಕ್ರೀಡಾಂಗಣಕ್ಕೂ ಭೇಟಿ ನೀಡಿ ಪರಿಶೀಲಿಸಿದೆ. ರಾಜಸ್ಥಾನ ರಾಯಲ್ಸ್ ತಂಡ ಕೂಡ ತನ್ನ ತವರು ಪಂದ್ಯಗಳನ್ನು ಪುಣೆಯಲ್ಲಿ ನಡೆಸುವ ಕುರಿತು ಮಾತುಕತೆ ನಡೆಸಿದೆ.
‘ಕೆಲವು ವಾರಗಳ ಹಿಂದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ನಿಯೋಗಗಳು ಗಹುಂಜೆಯ ಎಂಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದವು. ಅದಕ್ಕಾಗಿ ಆ ಫ್ರ್ಯಾಂಚೈಸಿಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ಕ್ರೀಡಾಂಗಣವು ಶ್ರೇಷ್ಠ ದರ್ಜೆಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ಪ್ರತಿಷ್ಠಿತ ತಾಣವೆಂಬುದು ಈ ತಂಡಗಳ ಭೇಟಿಯಿಂದ ರುಜುವಾತಾಗಿದೆ. ಎಂಸಿಎಗೆ ಬಿಸಿಸಿಐ ಕೂಡ ಉತ್ತಮ ಬೆಂಬಲ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೊಜಿಸುವ ಅವಕಾಶ ಸಿಗುವ ವಿಶ್ವಾಸವಿದೆ’ ಎಂದು ಎಂಸಿಎ ‘ಎಕ್ಸ್’ನಲ್ಲಿ ಪ್ರಕಟಣೆ ಹಾಕಿದೆ.
ಇತ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಮಹತ್ವದ ಪಂದ್ಯಗಳ ಆಯೋಜನೆಗಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮಾಡಿದ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಈಚೆಗಷ್ಟೇ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರು ಪ್ರತಿನಿಧಿಸಿದ್ದ ದೆಹಲಿ ತಂಡದ ಪಂದ್ಯಗಳನ್ನು ಚಿನ್ನಸ್ವಾಮಿ ಅಂಗಳದಲ್ಲಿ ಆಡಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರಲಿಲ್ಲ. ಅದರಿಂದಾಗಿ ಪಂದ್ಯಗಳನ್ನು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.