ಬೆಂಗಳೂರು: ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಘೋಷಿಸಿದ ನಂತರ ಮೊದಲ ಬಾರಿಗೆ ಉದ್ಯಾನನಗರಿಗೆ ಬಂದಿಳಿದರು.
ಇದೇ 17ರಂದು ನಡೆಯಲಿರುವ ಐಪಿಎಲ್ ಪಂದ್ಯದ ಪೂರ್ವಸಿದ್ಧತೆಗಾಗಿ ಅವರು ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಅವರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರೂ ಅಭ್ಯಾಸದಲ್ಲಿ ಪಾಲ್ಗೊಂಡರು. ಗಾಯಗೊಂಡಿರುವ ದೇವದತ್ತ ಪಡಿಕ್ಕಲ್ ಅವರ ಬದಲಿಗೆ ಸ್ಥಾನ ಪಡೆದಿರುವ ಮಯಂಕ್ ಅಗರವಾಲ್ ಕೂಡ ನೆಟ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದರು.
ಇದೇ ಸಂದರ್ಭದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರರೂ ಅಭ್ಯಾಸ ನಡೆಸಿದರು. ಮುಸ್ಸಂಜೆಗೆ ಮಳೆ ಬರುವ ವಾತಾವರಣ ಇದ್ದ ಕಾರಣ ಉಭಯ ತಂಡಗಳೂ ರಾತ್ರಿ ಏಳು ಗಂಟೆಯೊಳಗೆ ಅಭ್ಯಾಸ ಮುಗಿಸಿ ಹೋಟೆಲ್‌ಗೆ ಮರಳಿದವು.
ವಿರಾಟ್ ಲವಲವಿಕೆಯಿಂದ ಅಭ್ಯಾಸದಲ್ಲಿ ಪಾಲ್ಗೊಂಡರು. ಸಹ ಆಟಗಾರರೊಂದಿಗೆ ಕೀಟಲೆ ಮಾಡುತ್ತ, ನಗುತ್ತ ತಾಲೀಮು ಮಾಡಿದರು. ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆಯೊಂದಿಗೆ ಬಹಳ ಹೊತ್ತು ಮಾತನಾಡಿದರು. ತಮ್ಮೆದುರಿಗೆ ಬಂದ ಸಿಬ್ಬಂದಿ, ಅಧಿಕಾರಿಗಳ ಕೈಕುಲುಕಿ ನೆಟ್ಸ್‌ನತ್ತ ನಡೆದರು.
ಹೇಜಲ್‌ವುಡ್ ಲಭ್ಯ: ಪ್ಲೇ ಆಫ್ ಹೊಸ್ತಿಲಲ್ಲಿರುವ ಆರ್‌ಸಿಬಿ ತಂಡಕ್ಕೆ ಒಂದು ಶುಭಸುದ್ದಿ ಇದೆ. ತಂಡದ ಪ್ರಮುಖ ವೇಗಿ, ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಬೆಂಗಳೂರಿಗೆ ಮರಳಿದ್ದಾರೆ. ಭಾರತ–ಪಾಕ್ ಸಂಘರ್ಷದ ಕಾರಣ ಐಪಿಎಲ್ ಟೂರ್ನಿಗೆ ಒಂದು ವಾರ ಬಿಡುವು ನೀಡಿದ್ದ ಸಂದರ್ಭದಲ್ಲಿ ಬಹುತೇಕ ವಿದೇಶಿ ಆಟಗಾರರು ತಮ್ಮತವರಿಗೆ ಮರಳಿದ್ದರು. ಅದರಲ್ಲಿ ಬಹಳಷ್ಟು ಜನರು ಮರಳಿ ಬಂದಿಲ್ಲ. ಆದರೆ ಜೋಶ್ ಮರಳಿರುವುದು ಆರ್‌ಸಿಬಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.
ಟಿಮ್ ಡೇವಿಡ್, ವೆಸ್ಟ್ ಇಂಡೀಸ್‌ನ ರೊಮೆರಿಯೊ ಶೆಫರ್ಡ್, ದಕ್ಷಿಣ ಆಫ್ರಿಕಾದ ಲುಂಗಿ ಗಿಡಿ ಕೂಡ ಮರಳಿ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.