
ವಡೋದರ: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್ ದಾಳಿ ಬಳಿಕ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುರುವಾರ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ತಂಡವು ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಯು.ಪಿ ವಾರಿಯರ್ಸ್ ತಂಡವನ್ನು ಸುಲಭವಾಗಿ ಮಣಿಸಿತು. ಎರಡನೇ ಬಾರಿ ಕಿರೀಟದ ನಿರೀಕ್ಷೆಯಲ್ಲಿರುವ 2024ರ ಚಾಂಪಿಯನ್ ಆರ್‌ಸಿಬಿ ತಂಡವು ಎಲಿಮಿನೇಟರ್ ಪಂದ್ಯದ ವಿಜೇತರನ್ನು ಫೆ.5ರಂದು ನಡೆಯುವ ಫೈನಲ್‌ನಲ್ಲಿ ಎದುರಿಸಲಿದೆ.ಈ ಸೋಲಿನೊಂದಿಗೆ ವಾರಿಯರ್ಸ್ ತಂಡದ ಪ್ಲೇ ಆಫ್ ಕನಸು ಕೂಡ ಭಗ್ನಗೊಂಡಿತು.
ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಾರಿಯರ್ಸ್ ತಂಡಕ್ಕೆ ಕ್ಲರ್ಕ್ (22ಕ್ಕೆ 4) ಮತ್ತು ಹ್ಯಾರಿಸ್ (22ಕ್ಕೆ 2) ಕಡಿವಾಣ ಹಾಕಿದರು. ಮೆಗ್ ಲ್ಯಾನಿಂಗ್ (41; 30ಎ, 4X6, 6X1) ಮತ್ತು ದೀಪ್ತಿ ಶರ್ಮಾ (55; 43ಎ, 4X6, 6X1) ಅವರ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.
ಗುರಿ ಬೆನ್ನತ್ತಿದ ಬೆಂಗಳೂರು ತಂಡಕ್ಕೆ ಹ್ಯಾರಿಸ್ (75;37ಎ, 4x13, 6x2) ಮತ್ತು ಮಂದಾನ (54;27ಎ, 4x8, 6x2) ಅವರು ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಬಿರುಸಿನ 108 (55ಎ) ರನ್ ಸೇರಿಸಿದರು. ಹ್ಯಾರಿಸ್ ಔಟಾದ ಬಳಿಕ ಜಾರ್ಜಿಯಾ ವಾಲ್ (16) ಅವರೊಂದಿಗೆ ಮಂದಾನ ತಂಡವನ್ನು ದಡ ಸೇರಿಸಿದರು. 41 ಎಸೆತಗಳು ಬಾಕಿ ಇರುವಂತೆ ಎರಡು ವಿಕೆಟ್‌ಗೆ 147 ರನ್ ಗಳಿಸಿ ಗೆಲುವಿನ ಹಳಿಗೆ ಮರಳಿತು. ಮಂದಾನ ಹಾಲಿ ಆವೃತ್ತಿಯಲ್ಲಿ ಎರಡನೇ ಮತ್ತು ಲೀಗ್‌ನಲ್ಲಿ ಆರನೇ ಅರ್ಧಶತಕ ದಾಖಲಿಸಿದರು.
ಇದಕ್ಕೂ ಮೊದಲು ವಾರಿಯರ್ಸ್ ತಂಡದ ಆರಂಭಿಕ ಜೋಡಿ ಲ್ಯಾನಿಂಗ್ ಮತ್ತು ದೀಪ್ತಿ ಮೊದಲ ವಿಕೆಟ್ ಜೊತೆಯಾಟದಲ್ಲಿ 74 ರನ್ ಸೇರಿಸಿದರು. ಅದೂ ಎಂಟು ಓವರ್‌ಗಳಲ್ಲಿ. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸುವ ಭರವಸೆ ಮೂಡಿತ್ತು. ಆದರೆ, ನಂತರದಲ್ಲಿ ದಕ್ಷಿಣ ಆಫ್ರಿಕಾದ ಮಧ್ಯಮವೇಗಿ ಕ್ಲರ್ಕ್ ದಾಳಿಗೆ ಕುಸಿಯಿತು.
ಲ್ಯಾನಿಂಗ್ ಅವರ ವಿಕೆಟ್ ಗಳಿಸುವ ಮೂಲಕ ಕ್ಲಕ್ ಮೊದಲ ವಿಕೆಟ್ ಜೊತೆಯಾಟ ಮುರಿದರು. ಅದೇ ಓವರ್‌ನಲ್ಲಿ ಎಮಿ ಜೋನ್ಸ್ (1 ರನ್) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಉತ್ತಮ ಲಯದಲ್ಲಿದ್ದ ಹರ್ಲಿನ್ ಡಿಯೊಲ್ (14; 14ಎ) ಅವರನ್ನು ಕ್ಲೀನ್‌ಬೌಲ್ಡ್ ಮಾಡುವಲ್ಲಿ ಹ್ಯಾರಿಸ್ ಸಫಲರಾದರು. ಇದು ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚು ಮಾಡಿತು.
ಎರಡು ಓವರ್ ನಂತರ ಗ್ರೇಸ್ ಮತ್ತೊಂದು ಆಘಾತ ನೀಡಿದರು. ಕೊಲಿ ಟ್ರಯನ್ ವಿಕೆಟ್ ಗಳಿಸಿದರು. ಇದೆಲ್ಲದರ ನಡುವೆ ದೀಪ್ತಿ ಅರ್ಧಶತಕದ ಗಡಿ ದಾಟಿದರು. ಶ್ರೇಯಾಂಕಾ ಪಾಟೀಲ ಹಾಕಿದ 19ನೇ ಓವರ್‌ನಲ್ಲಿ ದೀಪ್ತಿ ಅವರು ಕ್ಲರ್ಕ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಕೊನೆಯ ಓವರ್ ಬೌಲಿಂಗ್ ಮಾಡಿದ ಕ್ಲರ್ಕ್ ಸಿಮ್ರನ್ ಶೇಖ್ ಮತ್ತು ಸೋಫಿ ಎಕ್ಲೆಸ್ಟೋನ್ ಅವರಿಗೆ ಡಗ್‌ಔಟ್ ದಾರಿ ತೋರಿಸಿದರು.
ಸಂಕ್ಷಿಪ್ತ ಸ್ಕೋರು:
ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 143 (ಮೆಗ್ ಲ್ಯಾನಿಂಗ್ 41, ದೀಪ್ತಿ ಶರ್ಮಾ 55, ಹರ್ಲೀನ್ ಡಿಯೊಲ್ 14, ನದೀನ್ ಡಿ ಕ್ಲರ್ಕ್ 22ಕ್ಕೆ4, ಗ್ರೇಸ್ ಹ್ಯಾರಿಸ್ 22ಕ್ಕೆ2).
ರಾಯಲ್ ಚಾಲೆಂಜರ್ಸ್ ಬೆಂಗಳೂರು: 13.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 (ಗ್ರೇಸ್ ಹ್ಯಾರಿಸ್ 75, ಸ್ಮೃತಿ ಮಂದಾನ 54; ಆಶಾ ಶೋಭಾನ 24ಕ್ಕೆ 1). ಫಲಿತಾಂಶ: ಆರ್‌ಸಿಬಿ ತಂಡಕ್ಕೆ ಎಂಟು ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಗ್ರೇಸ್ ಹ್ಯಾರಿಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.