ADVERTISEMENT

ಆಸ್ಟ್ರೇಲಿಯ ಪ್ರವಾಸ: ಕೆಂಪು–ಬಿಳಿ ಚೆಂಡುಗಳಲ್ಲಿ ಭಾರತ ತಂಡದ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 16:06 IST
Last Updated 15 ನವೆಂಬರ್ 2020, 16:06 IST
ವ್ಯಾಯಾಮನಿರತ ಮನೀಷ್ ಪಾಂಡೆ  –ಬಿಸಿಸಿಐ ಟ್ವಿಟರ್ ಚಿತ್ರ
ವ್ಯಾಯಾಮನಿರತ ಮನೀಷ್ ಪಾಂಡೆ  –ಬಿಸಿಸಿಐ ಟ್ವಿಟರ್ ಚಿತ್ರ   

ಸಿಡ್ನಿ(ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ನಂತರ ಆಸ್ಟ್ರೇಲಿಯಾದಲ್ಲಿ ಮೂರು ಮಾದರಿಗಳ ಸರಣಿಗಳನ್ನು ಆಡಲು ಭಾರತ ತಂಡ ತೆರಳಿದೆ.

ಆದರೆ, ಅಭ್ಯಾಸಕ್ಕೆ ಲಭಿಸಿರುವ ಕಾಲಾವಕಾಶದಲ್ಲಿ ಬಿಳಿ ಮತ್ತು ಕೆಂಪು ಚೆಂಡುಗಳಲ್ಲಿ ಏಕಕಾಲಕ್ಕೆ ಅಭ್ಯಾಸ ಮಾಡಲು ಆರಂಭಿಸಿದೆ.

ಶನಿವಾರ ಜಿಮ್ನಾಷಿಯಂನಲ್ಲಿ ಹೆಚ್ಚು ಹೊತ್ತು ಕಾಲ ಕಳೆದಿದ್ದ ಆಟಗಾರರು, ಭಾನುವಾರ ಪೂರ್ಣಪ್ರಮಾಣದಲ್ಲಿ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು. ಈ ಸಂದರ್ಭದಲ್ಲಿ ಎರಡೂ ವರ್ಣಗಳ ಚೆಂಡುಗಳನ್ನು ಬಳಸಿ ಆಡಿದರು.

ADVERTISEMENT

ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೊದಲ್ಲಿ ಈ ಕುರಿತು ಮಾಹಿತಿ ಇದೆ.

ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ್ ಪೂಜಾರ ಅವರು ಸ್ಲಿಪ್ ಫೀಲ್ಡಿಂಗ್‌ ಅಭ್ಯಾಸವನ್ನೂ ಮಾಡಿದರು. ಕ್ಯಾಚ್ ಪಡೆಯುವ ಅಭ್ಯಾಸದಲ್ಲಿ ಕೆಂಪು ಚೆಂಡನ್ನು ಹೆಚ್ಚು ಉಪಯೋಗಿಸಿದರು.

ಇದೇ ಮೊದಲ ಸಲ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಮಧ್ಯಮವೇಗಿ ಟಿ. ನಟರಾಜನ್ ಅವರು ಬಿಳಿ ಕುಕಬುರಾ ಚೆಂಡಿನಲ್ಲಿ ಬೌಲಿಂಗ್ ಮಾಡಿದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಆಡುವ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಬವಲಿಂಗ್ ಮಾಡಿದರು.

’ಐಪಿಎಲ್‌ನಲ್ಲಿ ನಟರಾಜನ್ ಯಶಸ್ಸು ಗಳಿಸಿರುವುದನ್ನು ನೋಡಿದ್ದೇವೆ. ಈಗ ಭಾರತ ತಂಡದ ನೆಟ್ಸ್‌ನಲ್ಲಿ ಅವರು ಮಾಡುತ್ತಿರುವ ಬೌಲಿಂಗ್ ಕೂಡ ಭರವಸೆದಾಯಕವಾಗಿದೆ. ಅವರ ಕನಸು ನನಸಾಗುವ ಹೊತ್ತು ಇದು‘ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಪೃಥ್ವಿ ಶಾ, ಹನುಮ ವಿಹಾರಿ, ರಿಷಭ್ ಪಂತ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಮಾತ್ರ ಕೇವಲ ಕೆಂಪು ಚೆಂಡಿನಲ್ಲಿ ಅಭ್ಯಾಸ ನಡೆಸಿದರು. ತಂಡದ ಉಳಿದವರು ಎರಡೂ ಬಣ್ಣದ ಚೆಂಡುಗಳಲ್ಲಿ ತಾಲೀಮು ನಡೆಸಿದರು.

ಟೆಸ್ಟ್ ತಂಡದ ಆಟಗಾರರು ಹೋದ ಮಾರ್ಚ್‌ ತಿಂಗಳಿಂದ ಇಲ್ಲಿಯವರೆಗೆ ಒಂದೂ ಟೆಸ್ಟ್ ಪಂದ್ಯ ಆಡಿಲ್ಲ. ಕೋವಿಡ್‌ –19 ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಎಲ್ಲ ದೇಶಗಳಲ್ಲಿಯೂ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಗಳು ನಡೆದಿದ್ದವು. ಆದರೆ, ಭಾರತ ತಂಡದ ಆಟಗಾರರು ಐಪಿಎಲ್‌ ಮೂಲಕ ಕಣಕ್ಕಿಳಿದರು. ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ದರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.