ADVERTISEMENT

ಆತ ನನಗಿಂತಲೂ ಹೆಚ್ಚು ಪ್ರತಿಭಾವಂತ: ಪಾಂಟಿಂಗ್ ಹೊಗಳಿದ ಭಾರತೀಯ ಬ್ಯಾಟರ್ ಯಾರು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 10:02 IST
Last Updated 13 ಏಪ್ರಿಲ್ 2022, 10:02 IST
ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್   

ಮುಂಬೈ: ‘ಆ ಯುವ ಬ್ಯಾಟರ್ ನನ್ನಷ್ಟೇ ಅಥವಾ ನನಗಿಂತಲೂ ಹೆಚ್ಚು ಪ್ರತಿಭಾವಂತ’. ಹೀಗೆಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಆಟಗಾರನನ್ನು ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ರಿಕಿ ಪಾಂಟಿಂಗ್ ಹೊಗಳಿದ ಆಟಗಾರ ಯಾರು? ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಪೃಥ್ವಿ ಶಾ.

ಐಪಿಎಲ್ ಕ್ರಿಕೆಟ್ ಟೂರ್ನಿಯ 15ನೇ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾ ನಾಲ್ಕು ಪಂದ್ಯಗಳಲ್ಲಿ 160 ರನ್ ಕಲೆಹಾಕಿದ್ದಾರೆ. ಅವರಿಗೆ ಮತ್ತೊಬ್ಬ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರಿಂದ ಉತ್ತಮ ಸಹಕಾರವೂ ದೊರೆಯುತ್ತಿದೆ.

‘ಪೃಥ್ವಿ ಶಾ ಬ್ಯಾಟಿಂಗ್ ನೋಡಿದರೆ ಆತ ನನ್ನಷ್ಟೇ ಅಥವಾ ನನಗಿಂತಲೂ ಹೆಚ್ಚು ಪ್ರತಿಭಾನ್ವಿತ ಎಂಬುದು ಗೊತ್ತಾಗುತ್ತದೆ. ಆತನನ್ನು ಭಾರತ ತಂಡದಲ್ಲಿ 100 ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರನನ್ನಾಗಿ ರೂಪಿಸಬೇಕೆಂಬ ಬಯಕೆ ಇದೆ. ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಆತ ಭಾರತ ತಂಡಕ್ಕಾಗಿ ಆಡುವಂತೆ ಮಾಡಬೇಕಿದೆ. ಇದು ಕೋಚಿಂಗ್‌ ಅನ್ನು ಆಸ್ವಾದಿಸುವ ವಿಷಯಗಳಲ್ಲಿ ಒಂದಾಗಿದೆ’ ಎಂದು ಪಾಂಟಿಂಗ್ ಹೇಳಿದ್ದಾರೆ.

ಐಪಿಎಲ್ ತಂಡಕ್ಕೆ ಕೋಚಿಂಗ್ ನೀಡುವುದು ಸಂತಸದ ವಿಚಾರ. ನಾನು ಕೋಚಿಂಗ್ ನೀಡುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಿಂಚಬೇಕೆಂದು ಬಯಸುತ್ತೇನೆ ಎಂದೂ ಅವರು ಹೇಳಿದ್ದಾರೆ.

‘ನಾನು ಮುಂಬೈ ಇಂಡಿಯನ್ಸ್‌ ಕೋಚ್ ಆಗಿದ್ದಾಗ ರೋಹಿತ್ ಶರ್ಮಾ ಯುವ ಆಟಗಾರನಾಗಿದ್ದರು. ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಇನ್ನೂ ಪಂದ್ಯಗಳನ್ನು ಆಡಿರಲಿಲ್ಲ. ನಾನು ತರಬೇತಿ ನೀಡಿದ ಅನೇಕ ಆಟಗಾರರು ಆಮೇಲೆ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಇಂಥ ಕೆಲಸ ಮಾಡಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ರಿಕಿ ಪಾಂಟಿಂಗ್ ಕೋಚಿಂಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 2020ರ ಐಪಿಎಲ್ ಟೂರ್ನಿಯ ಫೈನಲ್ ಪ್ರವೇಶಿಸಿತ್ತು. 2019ರಲ್ಲಿ ಪ್ಲೇ ಆಫ್‌ ಹಂತ ಪ್ರವೇಶಿಸಿತ್ತು.

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಗೆಲುವು ಸಾಧಿಸಿದೆ. ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಶನಿವಾರ ಆರ್‌ಸಿಬಿ ವಿರುದ್ಧ ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.