ADVERTISEMENT

ದ.ಆಫ್ರಿಕಾ ಎ ಸರಣಿ: ಲಯಕ್ಕೆ ಮರಳಲು ಪಂತ್, ಸಾಯಿ ಸುದರ್ಶನ್‌ಗೆ ಉತ್ತಮ ವೇದಿಕೆ

ಪಿಟಿಐ
Published 29 ಅಕ್ಟೋಬರ್ 2025, 6:54 IST
Last Updated 29 ಅಕ್ಟೋಬರ್ 2025, 6:54 IST
<div class="paragraphs"><p>ರಿಷಭ್ ಪಂತ್</p></div>

ರಿಷಭ್ ಪಂತ್

   

(ಪಿಟಿಐ ಚಿತ್ರ)

ಬೆಂಗಳೂರು: ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮೂರು ತಿಂಗಳ ಬಳಿಕ ಮರಳಿದ್ದಾರೆ. ಗುರುವಾರದಿಂದ ಇಲ್ಲಿನ ಬಿಸಿಸಿಐ ಸಿಒಇ ಮೈದಾನದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ–ಎ ವಿರುದ್ಧದ ಸರಣಿಯಲ್ಲಿ ಭಾರತ–ಎ ತಂಡವನ್ನು ಮುನ್ನಡೆಸಲಿದ್ದಾರೆ.

ADVERTISEMENT

ಜುಲೈ 23ರಂದು ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳದೆ ವಿಶ್ರಾಂತಿಗೆ ಜಾರಿದ್ದರು. ಇದೀಗ ಮುಂಬರುವ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ತಮ್ಮ ಲಯ ಕಂಡುಕೊಳ್ಳಲು ನಾಲ್ಕು ದಿನಗಳ ದಕ್ಷಿಣ ಆಫ್ರಿಕಾ ಎ ವಿರುದ್ಧದ ಸರಣಿ ಅತ್ಯಂತ ಪ್ರಮುಖವಾಗಿದೆ.

ಗಾಯದ ಕಾರಣದಿಂದಾಗಿ ಪಂತ್ ಇತ್ತೀಚಿಗೆ ಮುಕ್ತಾಯಗೊಂಡ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದರು. ಇದೀಗ ಅವರು ಚೇತರಿಸಿಕೊಂಡು ಭಾರತ ಎ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮಾತ್ರವಲ್ಲ, ಅವರು ದೈಹಿಕ ಸಾಮರ್ಥ್ಯದ ಜೊತೆಗೆ ವಿಕೆಟ್‌ ಕೀಪಿಂಗ್‌ನಲ್ಲಿ ಕೂಡ ತಮ್ಮ ಚುರುಕುತನ ಸಾಬೀತುಪಡಿಸಬೇಕಿದೆ.

ಸಾಯಿ ಸುದರ್ಶನ್‌ಗೆ ಉತ್ತಮ ಅವಕಾಶ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡದ ಭಾಗವಾಗಿರುವ ತಮಿಳುನಾಡು ಮೂಲದ ಬ್ಯಾಟರ್ ಸಾಯಿ ಸುದರ್ಶನ್ ದೊಡ್ಡ ಮೊತ್ತ ಕಲೆಹಾಕಲು ವಿಫಲರಾಗುತ್ತಿದ್ದಾರೆ. ಅವರು ಭಾರತದ ಪರ ಆಡಿರುವ 9 ಇನಿಂಗ್ಸ್‌ಗಳಿಂದ ಕೇವಲ 2 ಅರ್ಧಶತಕಗಳನ್ನು ಮಾತ್ರ ಸಿಡಿಸಿದ್ದಾರೆ. ಹಾಗಾಗಿ ದ.ಆಫ್ರಿಕಾ ಎ ವಿರುದ್ಧದ ಪಂದ್ಯಾವಳಿ ಅವರ ಅಭ್ಯಾಸಕ್ಕೆ ಅನುಕೂಲವಾಗಲಿದೆ.

ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ. ಭಾರತ ಎ ತಂಡದಲ್ಲಿ ಖಲೀಲ್ ಅಹ್ಮದ್, ಅಂಶುಲ್ ಕಾಂಬೋಜ್, ದೇವದತ್ತ ಪಡಿಕ್ಕಲ್, ಎನ್. ಜಗದೀಶನ್ ಕೂಡ ಇದ್ದಾರೆ. ಇವರುಗಳು ಕೂಡ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕೆಂದರೆ ಇಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದ್ದಾರೆ.

ಭಾರತ ಎ ತಂಡ:

ಭಾರತ ಎ : ರಿಷಬ್ ಪಂತ್ (ನಾಯಕ), ಆಯುಷ್ ಮ್ಹಾತ್ರೆ, ಎನ್. ಜಗದೀಶನ್ (ವಿ.ಕೀ), ಸಾಯಿ ಸುದರ್ಶನ್ (ಉಪನಾಯಕ), ದೇವದತ್ತ ಪಡಿಕ್ಕಲ್, ರಜತ್ ಪಾಟೀದಾರ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಮಾನವ್ ಸುತಾರ, ಖಲೀಲ್ ಅಹಮದ್, ಗುರ್ನೂರ್ ಬ್ರಾರ್, ಅನ್ಶುಲ್ ಕಾಂಬೋಜ್, ಯಶ್ ಠಾಕೂರ್, ಆಯುಷ್ ಬದೋನಿ, ಸರಾಂಶ್ ಜೈನ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.