
ಭಾರತ ಎ ತಂಡದ ಆಯುಷ್ ಮ್ಹಾತ್ರೆ ಬ್ಯಾಟಿಂಗ್
ಪ್ರಜಾವಾಣಿ ಚಿತ್ರ: ಕೃಷ್ಣ ಕುಮಾರ್ ಪಿ.ಎಸ್
ಬೆಂಗಳೂರು: ಮೂರು ತಿಂಗಳುಗಳ ನಂತರ ಕ್ರಿಕೆಟ್ ಕಣಕ್ಕೆ ಮರಳಿರುವ ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡವು ಶುಕ್ರವಾರ ಅಂದುಕೊಂಡಿದ್ದು ಒಂದಾದರೆ, ಆಗಿದ್ದು ಇನ್ನೊಂದು. ಅತಿ ಆತ್ಮವಿಶ್ವಾಸ ಮತ್ತು ಎದುರಾಳಿಗಳನ್ನು ಹಗುರವಾಗಿ ಪರಿಗಣಿಸಿದ್ದು ಆತಿಥೇಯರಿಗೆ ‘ತಿರುಗುಬಾಣ’ವಾಯಿತು.
ಇದರ ಫಲವಾಗಿ ದಕ್ಷಿಣ ಆಫ್ರಿಕಾ ಎ ತಂಡವು ಇಲ್ಲಿ ನಡೆಯುತ್ತಿರುವ ‘ಟೆಸ್ಟ್’ (ಚತುರ್ಥ ದಿನಗಳ ಪಂದ್ಯ) ನ ಮೊದಲ ಇನಿಂಗ್ಸ್‌ನಲ್ಲಿ 75 ರನ್‌ಗಳ ಮುನ್ನಡೆ ಸಾಧಿಸಿತು. ಭಾರತದ ದಿಗ್ಗಜ ಸ್ಪಿನ್ನರ್ ಆರ್. ಅಶ್ವಿನ್ ಅವರ ಅಭಿಮಾನಿ ದಕ್ಷಿಣ ಆಫ್ರಿಕಾ ಎ ತಂಡದ ಆಫ್‌ಸ್ಪಿನ್ನರ್ ಪ್ರೆನೆಲನ್ ಸುಬ್ರಾಯನ್ (61ಕ್ಕೆ5) ಆತಿಥೇಯ ತಂಡದ ದಿಂಡುರುಳಿಸಿದರು. ಭಾರತ ಪಾಳೆಯದಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ((65;76ಎ, 4X10) ಬಿಟ್ಟರೆ ಉಳಿದವರಿಂದ ದೊಡ್ಡ ಇನಿಂಗ್ಸ್ ಮೂಡಿಬರಲಿಲ್ಲ. ರಿಷಭ್ ಕೂಡ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡುವ ಬದಲು ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದರು. ಒಂದೆರಡು ಚೆಂದದ ಬೌಂಡರಿ ಹೊಡೆದರು. ಆದರೆ ಬೇಗನೆ ಪೆವಿಲಿಯನ್ ಮರಳಿದರು.
ದಕ್ಷಿಣ ಆಫ್ರಿಕಾ ಎ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ್ದ 309 ರನ್‌ಗಳ ಮೊತ್ತ ಉತ್ತರವಾಗಿ ಪಂತ್ ಪಡೆಯು 58 ಓವರ್‌ಗಳಲ್ಲಿ 234 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ತಂಡವು ಎರಡನೇ ದಿನದಾಟದ ಮುಕ್ತಾಯಕ್ಕೆ 11.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 ರನ್ ಗಳಿಸಿದೆ.
ಗುರುವಾರ ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ಬಳಗವು 9 ವಿಕೆಟ್‌ಗಳಿಗೆ 299 ರನ್ ಗಳಿಸಿತ್ತು. ಶುಕ್ರವಾರ ಬೆಳಿಗ್ಗೆ ಈ ಮೊತ್ತಕ್ಕೆ ಇನ್ನೂ 10 ರನ್ ಸೇರಿಸಿ ಉಳಿದ ಒಂದು ವಿಕೆಟ್ ಕಳೆದುಕೊಂಡಿತು. ಊಟದ ವಿರಾಮಕ್ಕೆ ಸುಮಾರು ಒಂದು ಗಂಟೆ ಬಾಕಿಯಿದ್ದಾಗ ಭಾರತ ಎ ತಂಡ ಇನಿಂಗ್ಸ್ ಆರಂಭಿಸಿತು. ಆಯುಷ್ ಹಾಗೂ ಸಾಯಿ ಸುದರ್ಶನ್ (32; 94ಎ, 4X3) ಮೊದಲ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಇದರಿಂದಾಗಿ ದೊಡ್ಡ ಇನಿಂಗ್ಸ್ ಕಟ್ಟುವ ವಿಶ್ವಾಸ ಮೂಡಿತ್ತು. ಆದರೆ ಸುದರ್ಶನ್ ಅಟದಲ್ಲಿ ಆತ್ಮವಿಶ್ವಾಸದ ಕೊರತೆ ಕಾಣುತ್ತಿತ್ತು.
22ನೇ ಓವರ್‌ನಲ್ಲಿ ಸುಬ್ರಾಯನ್‌ಗೆ ಆಯುಷ್ ಮೊದಲ ಬಲಿಯಾದರು. ನಂತರದಲ್ಲಿ ದೇವದತ್ತ ಪಡಿಕ್ಕಲ್, ಈಚೆಗೆ ಇದೇ ಕ್ರೀಡಾಂಗಣದಲ್ಲಿ ದುಲೀಪ್ ಟ್ರೋಫಿ ಪಂದ್ಯದಲ್ಲಿ ಶತಕ ಬಾರಿಸಿದ್ದ ರಜತ್ ಪಾಟೀದಾರ್ (19 ರನ್), ತನುಷ್ ಕೋಟ್ಯಾನ್ ಹಾಗೂ ಎಸ್.ಕೆ.ಕೆ. ಅಹಮದ್ ಅವರ ವಿಕೆಟ್‌ಗಳೂ ಸುಬ್ರಾಯನ್ ಪಾಲಾದವು. ಬಹುತೇಕ ಬ್ಯಾಟರ್‌ಗಳು ಹೊಡೆತಗಳ ಆಯ್ಕೆಯಲ್ಲಿ ಎಡವಿದರು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 91.2 ಓವರ್‌ಗಳಲ್ಲಿ 309. ಭಾರತ ಎ: 58 ಓವರ್‌ಗಳಲ್ಲಿ 234 (ಸಾಯಿ ಸುದರ್ಶನ್ 32 ಆಯುಷ್ ಮ್ಹಾತ್ರೆ 65 ರಜತ್ ಪಾಟೀದಾರ್ 19 ರಿಷಭ್ ಪಂತ್ 17 ಆಯುಷ್ ಬಡೋನಿ 38 ತನುಷ್ ಕೋಟ್ಯಾನ್ 13 ಪ್ರೆನೆಲನ್ ಸುಬ್ರಾಯನ್ 61ಕ್ಕೆ5 ಲುಥೊ ಸಿಪಾಮ್ಲಾ 35ಕ್ಕೆ2) ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 11.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 (ಜೊರ್ಡಾನ್ ಹರ್ಮನ್ ಬ್ಯಾಟಿಂಗ್ 12 ಲೆಸೆಗೊ ಸೆನೊಕ್ವಾನೆ ಬ್ಯಾಟಿಂಗ್ 9)
ಸುಬ್ರಾಯನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.