
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಬಹುನಿರೀಕ್ಷಿತ ಪುನರಾಗಮನ ಮಾಡಿದ್ದಾರೆ.
ಕೆ.ಎಲ್.ರಾಹುಲ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ಪ್ರಸಿದ್ಧ ಕೃಷ್ಣ ಸ್ಥಾನ ಕಳೆದುಕೊಂಡಿದ್ದಾರೆ.
ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಪಂತ್ ಅವರ ಪಾದಕ್ಕೆ ಚೆಂಡುಬಡಿದು ಮೂಳೆ ಮುರಿದಿತ್ತು. ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲೂ ಆಡಿರಲಿಲ್ಲ.
ಚೇತರಿಕೆಯ ಬಳಿಕೆ ಈಚೆಗೆ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ತಂಡ ಮುನ್ನಡೆಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ 90 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾಗಿದ್ದರು. ನಿರೀಕ್ಷೆಯಂತೆ ಎನ್.ಜಗದೀಶನ್ ತಂಡದಿಂದ ಹೊರಬಿದ್ದಿದ್ದಾರೆ.
ಭುಜದ ನೋವಿನಿಂದ ಚೇತರಿಸಿಕೊಂಡಿರುವ ಬಂಗಾಳದ ವೇಗಿ ಆಕಾಶ್ ದೀಪ್ ಅವರೂ ಪುನರಾಗಮನ ಮಾಡಿದ್ದಾರೆ. ಅವರು ರಣಜಿ ಟ್ರೋಫಿ ಮತ್ತು ಇರಾನಿ ಟ್ರೋಫಿಯಲ್ಲಿ ಆಡಿದ್ದರು. ಅವರು ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಗುರುವಾರ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ವೇಗದ ಪಡೆಯು ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರನ್ನೂ ಒಳಗೊಂಡಿದೆ. ಸ್ಪಿನ್ ವಿಭಾಗವು ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಜೊತೆಗೆ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಒಳಗೊಂಡಿದೆ.
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್– ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್, ಧ್ರುವ್ ಜುರೇಲ್, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬೂಮ್ರಾ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ಮತ್ತು ಆಕಾಶ್ ದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.