
ದುಬೈ: ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಐಸಿಸಿ ಬ್ಯಾಟರ್‌ಗಳ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ವೃತ್ತಿಜೀವನದ ಅತ್ಯುತ್ತಮ 7ನೇ ಸ್ಥಾನಕ್ಕೆ ಜಿಗಿದಿದ್ದಾರೆ.
ಲೀಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ(134 ಮತ್ತು 118) ದಾಖಲಿಸುವ ಮೂಲಕ ಪಂತ್ ಶ್ರೇಯಾಂಕ ಏರಿಕೆಯಾಗಿದೆ. ಒಂದು ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ದಾಖಲಿಸಿದ ಎರಡನೇ ವಿಕೆಟ್ ಕೀಪರ್ ಎಂಬ ಖ್ಯಾತಿಗೂ ಪಾತ್ರರಾಗಿದ್ಧಾರೆ. ಇದಕ್ಕೂ ಮುನ್ನ, ಜಿಂಬಾಬ್ವೆಯ ಆ್ಯಂಡಿ ಫ್ಲವರ್ ಎರಡೂ ಇನಿಂಗ್ಸ್‌ಗಳಲ್ಲಿ ಶತಕದ ಸಾಧನೆ ಮಾಡಿದ್ದರು.
ಆದರೆ, ಈ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಸೋಲು ಕಂಡಿತು. ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತ ನೀಡಿದ್ದ 371 ರನ್ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್, ಪಂದ್ಯದ ಕೊನೆಯ ದಿನ(ಜೂ 24) 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 149 ರನ್ ಗಳಿಸುವ ಮೂಲಕ ನಿರ್ಭೀತಿಯ ಬ್ಯಾಟಿಂಗ್ ಮಾಡಿದ ಬೆನ್ ಡಕೆಟ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದೇ ಪಂದ್ಯದಲ್ಲೇ ಶತಕ ದಾಖಲಿಸಿದ್ದ ಭಾರತ ಟೆಸ್ಟ್ ತಂಡದ ಹೊಸ ನಾಯಕ ಶುಭಮನ್ ಗಿಲ್ 5 ಹಂತ ಮೇಲೇರಿ 20ನೇ ಸ್ಥಾನಕ್ಕೆ ಬಂದಿದ್ಧಾರೆ.
ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 62 ಮತ್ತು 149 ರನ್ ಗಳಿಸಿದ್ದ ಬೆನ್ ಡಕೆಟ್ ಐದು ಸ್ಥಾನಗಳ ಏರಿಕೆ ಕಂಡು ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಇಂಗ್ಲೆಂಡ್‌ನ ಮತ್ತಿಬ್ಬರು ಆಟಗಾರರಾದ ಒಲಿ ಪೋಪ್ (ಮೂರು ಸ್ಥಾನಗಳ ಏರಿಕೆ ಕಂಡು 19ನೇ ಸ್ಥಾನ) ಮತ್ತು ಜೇಮಿ ಸ್ಮಿತ್ (ಎಂಟನೇ ಸ್ಥಾನಗಳ ಏರಿಕೆ ಕಂಡು 27ನೇ ಸ್ಥಾನ) ಕೂಡ ಗಮನಾರ್ಹ ಏರಿಕೆ ಕಂಡಿದ್ದಾರೆ.
ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ತಂಡದ ಸಹ ಆಟಗಾರ ಹ್ಯಾರಿ ಬ್ರೂಕ್, ರೂಟ್ ಅವರಿಗೆ ಅತ್ಯಂತ ನಿಕಟ ಪೈಪೋಟಿ ಒಡ್ಡಿದ್ದಾರೆ.
ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಒಂದೇ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಕೊಡುಗೆ ನೀಡಿದ ನಂತರ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರು ಸ್ಥಾನಗಳ ಏರಿಕೆ ಕಂಡು ಐದನೇ ಸ್ಥಾನಕ್ಕೆ ಏರಿದ್ದಾರೆ.
ಲೀಡ್ಸ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಉರುಳಿಸಿದ್ದ ವೇಗಿ ಜಸ್‌ಪ್ರೀತ್ ಬೂಮ್ರಾ ಬೌಲರ್‌ಗಳ ವಿಭಾಗದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.