ನವದೆಹಲಿ: ‘ಉತ್ತಮ ಪ್ರದರ್ಶನ ನೀಡುವವರೆಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಭಾರತ ತಂಡದಲ್ಲಿ ಆಡಬಹುದು’ ಎಂದು ಹೇಳಿರುವ ಹೆಡ್ ಕೋಚ್ ಗೌತಮ್ ಗಂಭೀರ್ ಅವರು, ಮುಂಬರುವ ಭಾರತ ತಂಡದ ಇಂಗ್ಲೆಂಡ್ ಟೆಸ್ಟ್ ಪ್ರವಾಸಕ್ಕೆ ಈ ಹಿರಿಯ ಬ್ಯಾಟರ್‌ಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ತಮ್ಮದೇನೂ ಪಾತ್ರವಿಲ್ಲ ಎಂದಿದ್ದಾರೆ.
‘ಮುಖ್ಯ ತರಬೇತುದಾರನ ಕೆಲಸ ತಂಡದ ಆಯ್ಕೆ ಮಾಡುವುದಲ್ಲ. ಅದು ಆಯ್ಕೆಗಾರರ ಕೆಲಸ. ಪಂದ್ಯ ಆಡುವ 11ರ ತಂಡವನ್ನು ಕೋಚ್ ಅಂತಿಮಗೊಳಿಸುತ್ತಾರೆ. ನನಗಿಂತ ಮೊದಲು ಮುಖಯ ತರಬೇತುದಾರರಾಗಿ ಕೆಲಸ ಮಾಡಿದವರು ಆಯ್ಕೆಗಾರರಾಗಿರಲಿಲ್ಲ. ಅವರಂತೆ ನಾನೂ ಆಯ್ಕೆಗಾರನಲ್ಲ’ ಎಂದು ಗಂಭೀರ್ ಸ್ಪಷ್ಟಪಡಿಸಿದರು. ಅವರು ಮಾಧ್ಯಮಸಂಸ್ಥೆಯೊಂದು ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ಈ ಬಗ್ಗೆ ಮತ್ತಷ್ಟು ಕೆದಕಿದಾಗ, ‘ಅವರು (ರೋಹಿತ್ ಮತ್ತು ಕೊಹ್ಲಿ) ಉತ್ತಮ ಪ್ರದರ್ಶನ ನೀಡುವವರರೆಗೆ ತಂಡದ ಭಾಗವಾಗಿರುತ್ತಾರೆ. ಯಾವಾಗ ಆರಂಭಿಸಬೇಕು ಮತ್ತು ಯಾವಾಗ ಅಂತ್ಯ ಹಾಡಬೇಕು ಎಂಬುದು ಅವರ ವೈಯಕ್ತಿಕ ನಿರ್ಧಾರ’ ಎಂದು ಗಂಭೀರ್ ಹೇಳಿದರು.
‘ಯಾವಾಗ ವಿದಾಯ ಹೇಳಬೇಕು ಎಂದು ಕೋಚ್ ಆಗಲಿ, ಆಯ್ಕೆಗಾರನಾಗಲಿ ಅಥವಾ ಬಿಸಿಸಿಐ ಆಗಲಿ ಹೇಳುವುದಿಲ್ಲ. ಉತ್ತಮವಾಗಿ ಆಡಿದರೆ 40 ವರ್ಷ ಮಾತ್ರವಲ್ಲ, 45 ವರ್ಷ ಆದರೂ ಆಡಬಹುದು. ತಡೆಯುವವರು ಯಾರು?’ ಎಂದು ಕೇಳಿದರು.
ಭಾರತ ತಂಡವು ಜೂನ್ 20ರಿಂದ ಐದು ಟೆಸ್ಟ್‌ಗಳ ಇಂಗ್ಲೆಡ್ ಪ್ರವಾಸ ಆರಂಭಿಸಲಿದೆ.
ಪಾಕ್ ಜೊತೆ ಪಂದ್ಯ ಬೇಡ:
ಭಾರತ ತಂಡವು ಏಷ್ಯಾ ಕಪ್ ಮತ್ತು ಐಸಿಸಿ ಸ್ಪರ್ಧೆಗಳು ಒಳಗೊಂಡಂತೆ ಯಾವುದೇ ವೇದಿಕೆಯಲ್ಲಿ ಪಾಕಿಸ್ತಾನ ಜೊತೆ ಕ್ರಿಕೆಟ್ ಬಾಂಧವ್ಯವನ್ನು ಸ್ಥಗಿತಗೊಳಿಸಬೇಕು ಎಂದು ಗಂಭೀರ್ ಕರೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.