ADVERTISEMENT

ಆತಿಥೇಯ ವೇಗಿಗಳನ್ನು ಎದುರಿಸಲು ಸಜ್ಜಾಗಿದ್ದೇವೆ

ಭಾರತ ತಂಡದ ಉಪ ನಾಯಕ ರೋಹಿತ್‌ ಶರ್ಮಾ ಹೇಳಿಕೆ

ಪಿಟಿಐ
Published 19 ನವೆಂಬರ್ 2018, 19:51 IST
Last Updated 19 ನವೆಂಬರ್ 2018, 19:51 IST
ರೋಹಿತ್‌ ಶರ್ಮಾ
ರೋಹಿತ್‌ ಶರ್ಮಾ   

ಬ್ರಿಸ್ಬೇನ್‌ :‘ಆಸ್ಟ್ರೇಲಿಯಾ ತಂಡದಲ್ಲಿ ‍ಅನುಭವಿ ಮತ್ತು ಅಪಾಯಕಾರಿ ವೇಗದ ಬೌಲರ್‌ಗಳಿದ್ದಾರೆ. ಅವರ ದಾಳಿಯನ್ನು ನಮ್ಮ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದು ಭಾರತ ತಂಡದ ಉಪ ನಾಯಕ ರೋಹಿತ್‌ ಶರ್ಮಾ ಸೋಮವಾರ ಹೇಳಿದ್ದಾರೆ.

ನಾಳೆ ನಡೆಯುವ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪೈಪೋಟಿ ನಡೆಸಲಿವೆ.

‘ಪರ್ತ್‌ ಮತ್ತು ಬ್ರಿಸ್ಬೇನ್‌ ಅಂಗಳದಲ್ಲಿ ಆಡುವುದು ಸವಾಲಿನ ಕೆಲಸ. ಇಲ್ಲಿನ ‘ಬೌನ್ಸಿ’ ಪಿಚ್‌ಗಳಲ್ಲಿ ಆತಿಥೇಯ ಬೌಲರ್‌ಗಳು ಪರಾಕ್ರಮ ಮೆರೆಯುತ್ತಾ ಬಂದಿದ್ದಾರೆ. ಆಸ್ಟ್ರೇಲಿಯಾ ಬೌಲರ್‌ಗಳು ನಮ್ಮ ಬ್ಯಾಟ್ಸ್‌ಮನ್‌ಗಳಿಗಿಂತಲೂ ಹೆಚ್ಚು ಎತ್ತರವಾಗಿದ್ದಾರೆ. ಅವರು ಹಾಕುವ ಎಸೆತಗಳು ಹೆಚ್ಚು ಪುಟಿಯುತ್ತವೆ. ಅವುಗಳನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬುದು ನಮಗೆ ಗೊತ್ತಿದೆ. ಈ ಬಾರಿ ಭಿನ್ನ ರಣನೀತಿಯೊಂದಿಗೆ ಕಣಕ್ಕಿಳಿದು ಆತಿಥೇಯರನ್ನು ಕಟ್ಟಿಹಾಕುತ್ತೇವೆ’ ಎಂದು ರೋಹಿತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಹೋದ ಬಾರಿ ಟೆಸ್ಟ್‌ ಸರಣಿ ಆಡಲು ಇಲ್ಲಿಗೆ ಬಂದಿದ್ದೆವು. ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಸೋತಿದ್ದೆವು. ಇನ್ನೊಂದರಲ್ಲಿ ಡ್ರಾ ಸಾಧಿಸಿದ್ದೆವು. ಎಲ್ಲಾ ಪಂದ್ಯಗಳಲ್ಲೂ ಆಸ್ಟ್ರೇಲಿಯಾಕ್ಕೆ ಪ್ರಬಲ ಪೈಪೋಟಿ ನೀಡಿದ್ದೆವು. 2019ರ ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ಎದುರು ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಸರಣಿ ನಡೆಯುತ್ತಿದೆ. ಇವುಗಳಲ್ಲಿ ಪ್ರಶಸ್ತಿ ಗೆದ್ದು ಮನೋಬಲ ಹೆಚ್ಚಿಸಿಕೊಳ್ಳುವುದು ನಮ್ಮ ಗುರಿ’ ಎಂದಿದ್ದಾರೆ.

‘ಆಸ್ಟ್ರೇಲಿಯಾ ತಂಡವನ್ನು ಅದರದ್ದೇ ನೆಲದಲ್ಲಿ ಸೋಲಿಸಬೇಕಾದರೆ ತಂಡದಲ್ಲಿರುವ ಎಲ್ಲರೂ ಜವಾಬ್ದಾರಿ ಅರಿತು ಆಡಬೇಕು. ಹೀಗಾಗಿ ತಂಡ ಸಾಮರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ನಮ್ಮಲ್ಲಿ ಪ್ರತಿಭಾನ್ವಿತ ಸ್ಪಿನ್ನರ್‌ಗಳಿದ್ದಾರೆ. ಅವರ ನೆರವಿನಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತೇವೆ’ ಎಂದು ತಿಳಿಸಿದ್ದಾರೆ.

‘ಬಾಲ್ಯದಲ್ಲಿ ನಾನು ಸಿಮೆಂಟ್‌ ಪಿಚ್‌ಗಳ ಮೇಲೆ ಹೆಚ್ಚು ಆಡುತ್ತಿದ್ದೆ. ಹೀಗಾಗಿ ಬ್ರಿಸ್ಬೇನ್‌ ಮತ್ತು ಪರ್ತ್‌ನಂತಹ ಬೌನ್ಸಿ ಪಿಚ್‌ಗಳಲ್ಲಿ ಆಡುವುದು ಸವಾಲೆನಿಸುವುದಿಲ್ಲ. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಆಡಿದ ಹಲವು ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದೇನೆ. ಈ ಬಾರಿಯೂ ಹೆಚ್ಚು ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಡಲು ಶ್ರಮಿಸುತ್ತೇನೆ’ ಎಂದು ನುಡಿದಿದ್ದಾರೆ.

ರೋಹಿತ್‌ ಕಟ್ಟಿಹಾಕಲು ವಿಶೇಷ ತಂತ್ರ: ಆಸ್ಟ್ರೇಲಿಯಾ ತಂಡದವರು ರೋಹಿತ್‌ ಅವರನ್ನು ಕಟ್ಟಿಹಾಕಲು ವಿಶೇಷ ತಂತ್ರ ರೂಪಿಸಿದ್ದಾರೆ.

‘ರೋಹಿತ್‌ ಅಪಾಯಕಾರಿ ಬ್ಯಾಟ್ಸ್‌ಮನ್‌. ಶಾರ್ಟ್‌ ಬಾಲ್‌ ಮತ್ತು ಇನ್‌ಸ್ವಿಂಗರ್‌ಗಳ ಮೂಲಕ ಅವರನ್ನು ತಬ್ಬಿಬ್ಬುಗೊಳಿಸಲು ನಾವು ತಯಾರಾಗಿದ್ದೇವೆ’ ಎಂದು ಆಸ್ಟ್ರೇಲಿಯಾದ ವೇಗದ ಬೌಲರ್‌ ನೇಥನ್‌ ಕೌಲ್ಟರ್‌ ನೈಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.