ADVERTISEMENT

ರೋಹಿತ್ ಅಗ್ರಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು: ಹರಭಜನ್ ಸಿಂಗ್ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2024, 16:15 IST
Last Updated 2 ಡಿಸೆಂಬರ್ 2024, 16:15 IST
<div class="paragraphs"><p>ರೋಹಿತ್ ಶರ್ಮಾ</p></div>

ರೋಹಿತ್ ಶರ್ಮಾ

   

– ಪಿಟಿಐ ಚಿತ್ರ

ನವದೆಹಲಿ: ಅಡಿಲೇಡ್ ಟೆಸ್ಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇಲ್ಲ. ಅವರು ಆರಂಭಿಕ ಬ್ಯಾಟರ್ ಅಥವಾ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರಬಹುದು ಎಂದು ವೀಕ್ಷಕ ವಿವರಣೆಗಾರ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈಚೆಗೆ ಪರ್ತ್‌ನಲ್ಲಿ ನಡೆದಿದ್ದ ಸರಣಿಯ ಮೊದಲ ಟೆಸ್ಟ್‌ನಲ್ಲಿ ರೋಹಿತ್ ಅವರು ಆಡಿರಲಿಲ್ಲ. ಆ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ಅವರು ಇನಿಂಗ್ಸ್ ಆರಂಭಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿ  ದ್ವಿಶತಕದ ಜೊತೆಯಾಟವಾಡಿದ್ದರು.  ಇದೀಗ ಎರಡನೇ ಪಂದ್ಯಕ್ಕೆ ರೋಹಿತ್ ಮರಳಿದ್ದಾರೆ.  ಆದ್ದರಿಂದ ಅವರು ಮತ್ತೆ ಇನಿಂಗ್ಸ್ ಆರಂಭಿಸುವರೋ ಅಥವಾ ಕ್ರಮಾಂಕ ಬದಲಿಸಿಕೊಂಡು ಯಶಸ್ವಿ ಮತ್ತು ರಾಹುಲ್ ಅವರಿಗೆ ಅವಕಾಶ ಕೊಡುವರೇ ಎಂಬ ಚರ್ಚೆಗಳು ನಡೆಯುತ್ತಿವೆ. 

‘ರೋಹಿತ್ ಅವರು ಯಶಸ್ವಿ ಜೊತೆಗೆ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚು. ಇದರಿಂದಾಗಿ ಕೆ.ಎಲ್. ರಾಹುಲ್ ಮೂರನೇ ಕ್ರಮಾಂಕದಲ್ಲಿ ಆಡಬಹುದು.  ಇಲ್ಲದಿದ್ದರೆ ರೋಹಿತ್ ಮೂರನೇ ಕ್ರಮಾಂಕಕ್ಕೂ ಬರಬಹುದು. ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಅವರು ಆಡುವುದಿಲ್ಲ’ ಎಂದು ವಿಶ್ವ ಟೆನಿಸ್ ಲೀಗ್‌ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಆಫ್‌ಸ್ಪಿನ್ನರ್ ಹರಭಜನ್ ಹೇಳಿದ್ದಾರೆ.

‘ರೋಹಿತ್ ಅವರು ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬರುವುದು ತಂಡದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಪರಿಣತ ಮತ್ತು ಅನುಭವಿ ಬ್ಯಾಟರ್ ಅಗ್ರ ನಾಲ್ಕರಲ್ಲಿ ಇರುವುದು ಒಳಿತು. ಮೊದಲ ನಾಲ್ವರು ಬ್ಯಾಟರ್‌ಗಳು ತಂಡದ ಆಧಾರಸ್ತಂಭವಾಗಿರುತ್ತಾರೆ’ ಎಂದರು. 

ಮೊದಲ ಟೆಸ್ಟ್‌ನಲ್ಲಿ ಆರ್. ಅಶ್ವಿನ್ ಮತ್ತು ರವೀಂದ್ರಜಡೇಜ ಅವರಿಗೆ ವಿಶ್ರಾಂತಿ ನೀಡಿ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದ ಕುರಿತು ಹರಭಜನ್ ಪ್ರತಿಕ್ರಿಯಿಸಿದರು. 

‘ನ್ಯೂಜಿಲೆಂಡ್ ಸರಣಿಯಲ್ಲಿ ವಾಷಿಂಗ್ಟನ್ ತಮ್ಮ ಸಾಮರ್ಥ್ಯ ತೋರಿದ್ದರು. ಅಶ್ವಿನ್ ಅವರ ಸ್ಥಾನವನ್ನು ತುಂಬಲು ತಾವು ಸಿದ್ಧ ಎಂಬ ಸಂದೇಶವನ್ನೂ ನೀಡಿದ್ದರು. ಅದರಿಂದಾಗಿ ಅವರಿಗೆ ಇಲ್ಲಿ ಅವಕಾಶ ನೀಡಿರಬಹುದು’ ಎಂದು ಹರಭಜನ್ ಸಮರ್ಥಿಸಿಕೊಂಡರು. 

ಅಶ್ವಿನ್ ವಯಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರಿಗೆ 38 ವರ್ಷವಷ್ಟೇ. ಅದೇನೂ ಬಹಳ ಅಲ್ಲ. ಅವರೇನೂ 58 ವರ್ಷದವರಲ್ಲ. ಬಹಳಷ್ಟು ವರ್ಷಗಳಿಂದ ಆಡಿದ್ದರಿಂದ ಭುಜದ ಸ್ನಾಯುಗಳಲ್ಲಿ ಒಂದಿಷ್ಟು ಗಾಯ, ಸೆಳೆತಗಳೂ ಆಗಿರುವ ಸಂಭವವಿದೆ. ಅದೆಲ್ಲವೂ ಸಹಜ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.