ಭಾರತ ತಂಡ
–ಪಿಟಿಐ ಚಿತ್ರ
ರಾಜಕೋಟ್: ಮಿಂಚಿನ ಆಟಕ್ಕೆ ಹೆಸರಾಗಿದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ದೀರ್ಘ ಕಾಲದಿಂದ ಅಂಥ ಆಟವಾಡಿಲ್ಲ. ಇಂಗ್ಲೆಂಡ್ ವಿರುದ್ಧ ಮಂಗಳವಾರ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಅವರು ಮಾಮೂಲಿ ಆಕ್ರಮಣಕಾರಿ ಆಟಕ್ಕೆ ಮರಳಬಹುದೆಂಬ ನಿರೀಕ್ಷೆಯಲ್ಲಿ ತಂಡ ಇದೆ.
ಭಾರತ ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆದಿದ್ದು, ಸರಣಿ ಗೆಲುವಿನ ವಿಶ್ವಾಸದಿಂದ ಇದೆ. ತಂಡದ ಇತರ ಆಟಗಾರರು ಬಿರುಸಿನ ಆಟವಾಡಿದ್ದರೂ ಸೂರ್ಯ ಅವರು ಆಕ್ರಮಣಕಾರಿ ಇನಿಂಗ್ಸ್ ಆಡದೇ ಹಲವು ಪಂದ್ಯಗಳು ಕಳೆದಿವೆ. ವಿಶ್ವದ ಶ್ರೇಷ್ಠ ಟಿ20 ಬ್ಯಾಟರ್ ಎನಿಸಿರುವ ಸೂರ್ಯ ಹೋದ ವರ್ಷ 17 ಪಂದ್ಯಗಳಿಂದ 26.81 ಸರಾಸರಿಯಲ್ಲಿ 429 ರನ್‌ಗಳನ್ನಷ್ಟೇ ಗಳಿಸಿದ್ದಾರೆ.
2021ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ವರ್ಷ 35ರ ಸರಾಸರಿಯಲ್ಲಿ ರನ್ ಗಳಿಸಿದ್ದರು. ನಂತರದ ಎರಡು ವರ್ಷ ಅದು 45ರ ಸರಾಸರಿಗೆ ಏರಿತು. ತಂಡ ಉತ್ತಮ ಪ್ರದರ್ಶನ ನೀಡಿದ್ದರೂ ಮುಂಬೈನ 34 ವರ್ಷ ವಯಸ್ಸಿನ ಆಟಗಾರ ಮೊದಲೆರಡು ಪಂದ್ಯಗಳಲ್ಲಿ ಸಪ್ಪೆಯಾಗಿದ್ದಾರೆ.
ತಿಲಕ್ ವರ್ಮಾ ಅವರ ಹೊಣೆಯರಿತ ಇನಿಂಗ್ಸ್‌ನಿಂದಾಗಿ ಭಾರತ ಚೆನ್ನೈನ ಪಂದ್ಯ ಜಯಿಸಿತ್ತು. ಸಂಜು ಸ್ಯಾಮ್ಸನ್ ಅವರು ಶಾರ್ಟ್ ಬಾಲ್‌ಗಳಿಗೆ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ವೇಗದ ಬೌಲರ್ ಜೋಫ್ರಾ ಆರ್ಚರ್ ಎರಡು ಬಾರಿ ಸಂಜು ಅವರ ವಿಕೆಟ್ ಪಡೆದಿದ್ದಾರೆ.
ರಾಜಕೋಟ್ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳ ಪಾಲಿಗೆ ಸ್ನೇಹಿ.
ಆರ್ಚರ್ ಮತ್ತು ಮಾರ್ಕ್ ವುಡ್ ಆತಿಥೇಯ ತಂಡದ ಬ್ಯಾಟರ್‌ಗಳಿಗೆ ಸವಾಲೊಡ್ಡಿದರೂ, ತಿಲಕ್ ವರ್ಮಾ ಮಾತ್ರ ಇವರಿಬ್ಬರನ್ನು ವಿಶ್ವಾಸದಿಂದ ಎದುರಿಸಿದರು.
ರಿಂಕು ಸಿಂಗ್ ಮತ್ತು ನಿತೀಶ್ ರೆಡ್ಡಿ ಗಾಯಾಳಾಗಿರುವ ಕಾರಣ ಶಿವಂ ದುಬೆ ಅಥವಾ ರಮಣದೀಪ್ ಸಿಂಗ್ ಅವರಲ್ಲೊಬ್ಬರು ಸ್ಥಾನ ಪಡೆಯಬಹುದು. ಟಿ20 ಪಂದ್ಯಗಳಲ್ಲಿ ಸ್ಪಿನ್ನರ್‌ಗಳನ್ನು ದಂಡಿಸುವುದಕ್ಕೆ ಹೆಸರು ಪಡೆದಿರುವ ದುಬೆ, ಲೆಗ್ ಸ್ಪಿನ್ನರ್ ಅದಿಲ್ ರಶೀದ್ ವಿರುದ್ಧ ಉಪಯುಕ್ತ ಆಟವಾಡಬಹುದು.
ಅರ್ಷದೀಪ್ ಸಿಂಗ್ ಮಾತ್ರ ತಂಡದಲ್ಲಿರುವ ಏಕೈಕ ಪರಿಣತ ವೇಗಿ ಎನಿಸಿದ್ದು, ಹಾರ್ದಿಕ್ ಪಾಂಡ್ಯ ಅವರಿಗೆ ಬೆಂಬಲ ನೀಡಿದ್ದಾರೆ. ತಂಡ ಇದೇ ಸಂಯೋಜನೆ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ರವಿ ಬಿಷ್ಣೋಯಿ ಮಧ್ಯದ ಓವರುಗಳಲ್ಲಿ ಪರಿಣಾಮಕಾರಿ ಎನಿಸಿದ್ದಾರೆ.
ಸರಣಿ ಜೀವಂತವಾಗಿರಿಸಲು ಇಂಗ್ಲೆಂಡ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ. ಬ್ಯಾಟ್‌ನಿಂದ ಪ್ರವಾಸಿ ತಂಡ ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿದೆ. ಗುಣಮಟ್ಟದ ಸ್ಪಿನ್ ದಾಳಿಯೆದುರು ಇತರ ಬ್ಯಾಟರ್‌ಗಳು ಪರದಾಡುತ್ತಿರುವಾಗ ನಾಯಕ ಜೋಸ್ ಬಟ್ಲರ್ ಭರವಸೆಯ ಆಟವಾಡಿದ್ದಾರೆ.
ಜೇಮಿ ಸ್ಮಿತ್ ಮತ್ತು ಬ್ರೈಡನ್ ಕರ್ಸ್ ಅವರು ಉಪಯುಕ್ತ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲರ್‌ಗಳ ಪೈಕಿ ಆರ್ಚರ್ ವಿಕೆಟ್ ಪಡೆದಿದ್ದರೂ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಚೆನ್ನೈನಲ್ಲಿ ಅವರ 4 ಓವರುಗಳಲ್ಲಿ 60 ರನ್‌ಗಳು ಸೂರೆಯಾಗಿದ್ದವು. ಆದರೆ ಅದಿಲ್ ರಶೀದ್ ಮಿತವ್ಯಯಿ ಎನಿಸಿದ್ದಾರೆ.
ಶಮಿ ಸಂಪೂರ್ಣ ಫಿಟ್: ಸಿತಾಂಶು
ರಾಜ್‌ಕೋಟ್ (ಪಿಟಿಐ): ಅನುಭವಿ ವೇಗಿ ಮೊಹಮ್ಮದ್ ಶಮಿ ಅವರು ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿಲ್ಲ. ಆದರೆ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಉಳಿದ ಪಂದ್ಯಗಳಿಗೆ ಆಡುವ ಕುರಿತು ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನೂತನ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಸೋಮವಾರ ಹೇಳಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ 34 ವರ್ಷ ವಯಸ್ಸಿನ ಶಮಿ ಅವರು ಭಾರತ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20, ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.
ಮೊದಲೆರಡು ಟಿ20 ಪಂದ್ಯಗಳಲ್ಲಿ ಶಮಿಗೆ ಆಡಲು ಅವಕಾಶ ಸಿಗದಿರುವುದಕ್ಕೆ ಅವರ ಫಿಟ್‌ನೆಸ್ ಬಗ್ಗೆ ಸಂಶಯ ಮೂಡಿಸಿತ್ತು. ಈ ಬಗ್ಗೆ ಸಿತಾಂಶು ಸ್ಪಷ್ಟನೆ ನೀಡಿದ್ದಾರೆ.
‘ಹೌದು, ಶಮಿ ಸಂಪೂರ್ಣ ಫಿಟ್ ಆಗಿದ್ದಾರೆ. ಆದರೆ, ಮೂರನೇ ಟಿ20 ಪಂದ್ಯದಲ್ಲಿ ಅವರು ಆಡುವ ಅಥವಾ ಆಡದಿರುವ ಬಗ್ಗೆ ಸಂಬಂಧಪಟ್ಟವರು ತೀರ್ಮಾನಿಸುತ್ತಾರೆ. ಆದರೆ, ಮುಂಬರುವ ಪಂದ್ಯಗಳಲ್ಲಿ ಖಂಡಿತವಾಗಿಯೂ ತಂಡವನ್ನು ಸೇರಿಕೊಳ್ಳುವರು’ ಎಂದು ಸಿತಾಂಶು ತಿಳಿಸಿದರು.
ಶಮಿ ಅವರು ಕಳೆದ ವರ್ಷ ಫೆಬ್ರುವರಿಯಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಪಂದ್ಯ ಆರಂಭ: ರಾತ್ರಿ 7.00
ನೇರ ಪ್ರಸಾರ್: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.