ADVERTISEMENT

IND vs ENG: ಪದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆದ ಸಾಯಿ ಸುದರ್ಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜೂನ್ 2025, 12:52 IST
Last Updated 20 ಜೂನ್ 2025, 12:52 IST
<div class="paragraphs"><p>ಸಾಯಿ ಸುದರ್ಶನ್</p></div>

ಸಾಯಿ ಸುದರ್ಶನ್

   

(ರಾಯಿಟರ್ಸ್ ಚಿತ್ರ)

ಲೀಡ್ಸ್: ಪದಾರ್ಪಣಾ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ಟೀಮ್ ಇಂಡಿಯಾದ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ನಿರಾಸೆ ಮೂಡಿಸಿದ್ದಾರೆ.

ADVERTISEMENT

ಆತಿಥೇಯ ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಉತ್ತಮ ಆರಂಭ ಪಡೆದುಕೊಂಡಿತ್ತು. ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟ ಕಟ್ಟಿದರು.

ಈ ಹಂತದಲ್ಲಿ ರಾಹುಲ್ ವಿಕೆಟ್ ಪತನವಾಯಿತು. ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಸಾಯಿ ಮೇಲೆ ಅಪಾರ ನಿರೀಕ್ಷೆ ಇತ್ತು.

ಆದರೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ದಾಳಿಯಲ್ಲಿ ಕಳಪೆ ಹೊಡೆತಕ್ಕೆ ಮುಂದಾದ ಸಾಯಿ ಭಾರಿ ಬೆಲೆಯನ್ನು ತೆತ್ತರು. ನಾಲ್ಕು ಎಸೆತಗಳಲ್ಲಿ ಖಾತೆ ತೆರೆಯಲಾಗದೇ ವಿಕೆಟ್ ಕೀಪರ್ ಜೇಮಿ ಸ್ಮಿತ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ಜೂನ್ 20ರಂದು ಪದಾರ್ಪಣೆ...

ಜೂನ್ 20ರಂದು ಸಾಯಿ ಸುದರ್ಶನ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಇದೇ ದಿನಾಂಕದಂದು ಪದಾರ್ಪಣೆ ಮಾಡಿದ್ದರು.

1996ರ ಇಂಗ್ಲೆಂಡ್ ಪ್ರವಾಸದಲ್ಲಿ ಜೂನ್ 20ರಂದೇ ಗಂಗೂಲಿ ಹಾಗೂ ದ್ರಾವಿಡ್ ಚೊಚ್ಚಲ ಟೆಸ್ಟ್ ಕ್ಯಾಪ್ ಪಡೆದಿದ್ದರು. ಇನ್ನು ವಿರಾಟ್ 2011ರ ಜೂನ್ 20ರಂದು ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

317ನೇ ಟೆಸ್ಟ್ ಕ್ಯಾಪ್...

23ರ ಹರೆಯದ ಸಾಯಿ ಸುದರ್ಶನ್ ಟೀಮ್ ಇಂಡಿಯಾದ ಟೆಸ್ಟ್ ಕ್ಯಾಪ್ ಧರಿಸಿದ 317ನೇ ಆಟಗಾರ ಎನಿಸಿದ್ದಾರೆ. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ನಿರಾಸೆ ಮೂಡಿಸಿದರೂ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಛಾಪು ಮೂಡಿಸಲು ಇನ್ನೊಂದು ಅವಕಾಶವಿದೆ.

ಚೇತೇಶ್ವರ ಪೂಜಾರ ಅವರು ಸಾಯಿ ಸುದರ್ಶನ್‌ಗೆ ಟೆಸ್ಟ್ ಕ್ಯಾಪ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.