ADVERTISEMENT

ಪ್ರಶಸ್ತಿ ಜಯದಲ್ಲಿ ಸಲ್ಮಾ ಪಾತ್ರ ಮುಖ್ಯವಾಗಿತ್ತು: ಮಂದಾನ

ಪಿಟಿಐ
Published 10 ನವೆಂಬರ್ 2020, 11:39 IST
Last Updated 10 ನವೆಂಬರ್ 2020, 11:39 IST
ಟ್ರೇಲ್‌ಬ್ಲೇಜರ್ಸ್ ತಂಡದ ನಾಯಕಿ ಸ್ಮೃತಿ ಮಂದಾನ   -ಪಿಟಿಐ ಚಿತ್ರ
ಟ್ರೇಲ್‌ಬ್ಲೇಜರ್ಸ್ ತಂಡದ ನಾಯಕಿ ಸ್ಮೃತಿ ಮಂದಾನ -ಪಿಟಿಐ ಚಿತ್ರ   

ಶಾರ್ಜಾ: ಮಹಿಳಾ ಚಾಲೆಂಜ್‌ ಟೂರ್ನಿಯ ಪ್ರಶಸ್ತಿ ಜಯಿಸುವಲ್ಲಿ ಆಫ್‌ ಸ್ಪಿನ್ನರ್‌ ಸಲ್ಮಾ ಖಾತೂನ್‌ ಅವರ ಬೌಲಿಂಗ್‌ ಪ್ರಮುಖ ಪಾತ್ರ ವಹಿಸಿತು ಎಂದು ಟ್ರೇಲ್‌ಬ್ಲೇಜರ್ಸ್ ತಂಡದ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ. ಸೋಮವಾರ ನಡೆದ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಟ್ರೇಲ್‌ಬ್ಲೇಜರ್ಸ್‌ ತಂಡವು 16 ರನ್‌ಗಳಿಂದ ಸೂಪರ್‌ನೋವಾಸ್‌ಅನ್ನು ಮಣಿಸಿತ್ತು. ಮೊದಲ ಬಾರಿ ಪ್ರಶಸ್ತಿಯನ್ನು ಎತ್ತಿಹಿಡಿದಿತ್ತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮಂದಾನ ಬಳಗ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 118 ರನ್ ಮಾತ್ರ ಗಳಿಸಿತ್ತು. ಗುರಿ ಬೆನ್ನತ್ತಿದ್ದ ಎರಡು ಬಾರಿಯ ಚಾಂಪಿಯನ್‌ ಸೂಪರ್‌ನೋವಾಸ್‌ 7 ವಿಕೆಟ್‌ ಕಳೆದುಕೊಂಡು 102 ರನ್‌ ಗಳಿಸಿ ಸೋಲು ಅನುಭವಿಸಿತ್ತು.

‘ಫೈನಲ್‌ನಲ್ಲಿ ನಾವು ಅತ್ಯುತ್ತಮವಾಗಿ ಆಡಿದೆವು. 130–140 ರನ್ ಗಳಿಸಲು ಪ್ರಯತ್ನಿಸಿದೆವು. ಆದರೆ ಒಂದು ಕಡೆ ಲಯ ತಪ್ಪಿಹೋಯಿತು. ಬ್ಯಾಟಿಂಗ್‌ಗೆ ಪಿಚ್‌ ಅಷ್ಟೊಂದು ಸಹಕರಿಸುತ್ತಿರಲಿಲ್ಲ. ಕನಿಷ್ಠ 120 ರನ್‌ ಗಳಿಸಿದರೂ ಹೋರಾಟ ತೋರಬಹುದು ಎಂಬುದು ತಿಳಿಯಿತು. ನಮ್ಮ ಸ್ಪಿನ್‌ ಬೌಲಿಂಗ್‌ ಪಡೆ ಉತ್ತಮವಾಗಿತ್ತು’ ಎಂದು ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಂದಾನ ನುಡಿದರು.

ADVERTISEMENT

ಆಫ್‌ಸ್ಪಿನ್ನರ್‌ ಸಲ್ಮಾ ಅವರು ಸೂಪರ್‌ನೋವಾಸ್‌ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಸೇರಿದಂತೆ ಮೂವರ ವಿಕೆಟ್‌ ಗಳಿಸಿದ್ದರು.

‘ಸಲ್ಮಾ ಅದ್ಭುತವಾಗಿ ಬೌಲ್‌ ಮಾಡಿದರು. 19ನೇ ಓವರ್‌ನಲ್ಲಿ ಅವರು ತೋರಿದ ಸಾಮರ್ಥ್ಯವು ಗೆಲುವಿಗೆ ಕಾರಣವಾಯಿತು‘ ಎಂದು ಮಂದಾನ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.