ಜೈಪುರ: ರಾಹುಲ್ ದ್ರಾವಿಡ್ ಅವರ ನಾಯಕತ್ವ ತಮ್ಮ ವೃತ್ತಿ ಜೀವನದ ಮೇಲೆ ಗಾಢ ಪ್ರಭಾವ ಬೀರಿದೆ ಎಂದು ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಐದನೇ ಬಾರಿಗೆ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಹೇಳಿದ್ದಾರೆ.
ಭಾರತ ತಂಡದ ಹೆಡ್ ಕೋಚ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಬಳಿಕ ದ್ರಾವಿಡ್ ಈ ಋತುವಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮುಖ್ಯ ಕೋಚ್ ಆಗಿ ಮರಳಿದ್ದಾರೆ. ದ್ರಾವಿಡ್ ಈ ತಂಡದ ಜೊತೆ ದೀರ್ಘಕಾಲದ ನಂಟು ಹೊಂದಿದ್ದಾರೆ. 2012–13ರಲ್ಲಿ ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ವಹಿಸಿದ್ದರು. ಅದೇ ವೇಳೆ ಭಾರತದ ಈ ದಿಗ್ಗಜ ಆಟಗಾರ ಟ್ರಯಲ್ಸ್ ವೇಳೆ ಸ್ಯಾಮ್ಸನ್ ಅವರನ್ನು ಗುರುತಿಸಿ ತಂಡದಲ್ಲಿ ಆಡುವ ಅವಕಾಶ ನೀಡಿದ್ದರು.
ದ್ರಾವಿಡ್ ಅವರು 2014–15ರಲ್ಲಿ ತಂಡದ ರಾಜಸ್ಥಾನ ರಾಯಲ್ಸ್ ನಿರ್ದೇಶಕ ಹಾಗೂ ಮೆಂಟರ್ ಆದರು.
ಯುವ ಪ್ರತಿಭೆಯಾಗಿ ಸೇರ್ಪಡೆಯಾದ ದಿನದಿಂದ ತಂಡಕ್ಕೆ ನಾಯಕನಾಗುವರೆಗಿನ ತಮ್ಮ ಪಯಣದ ಮೇಲೆ ದ್ರಾವಿಡ್ ಅವರ ಮಾರ್ಗದರ್ಶನ ಸಾಕಷ್ಟು ಪ್ರಭಾವ ಬೀರಿದೆ ಎಂದು ಅವರು ಶುಕ್ರವಾರ ಜಿಯೊ ಹಾಟ್‌ಸ್ಟಾರ್‌ಗೆ ತಿಳಿಸಿದ್ದಾರೆ.
‘ನಾನು ಮೊದಲ ಬಾರಿ ಐಪಿಎಲ್ ಋತು ಆರಂಭವಾಗುವ ಸಂದರ್ಭದಲ್ಲಿ, ಟ್ರಯಲ್ಸ್ ವೇಳೆ ರಾಹುಲ್ ಸರ್ ನನ್ನ ಆಟವನ್ನು ಗುರುತಿಸಿದ್ದರು. ತಂಡದ ನಾಯಕನಾಗಿ ಅವರು ಪ್ರತಿಭೆಗಳ ಅನ್ವೇಷಣೆಯಲ್ಲಿದ್ದರು. ನನ್ನ ಬಳಿ ಬಂದು ‘ನಮ್ಮ ತಂಡಕ್ಕೆ ಆಡುತ್ತೀಯಾ?’ ಎಂದು ಕೇಳಿದರು. ಅಂದಿನಿಂದ ಇಂದಿನವರೆಗಿನ ಅವಧಿ ಈಗ ಕನಸಿನಂತೆ ಕಾಣುತ್ತಿದೆ’ ಎಂದು ಸ್ಯಾಮ್ಸನ್ ಹೇಳಿದರು.
‘ಈಗ ನಾನು ಫ್ರಾಂಚೈಸಿಯ ಕ್ಯಾಪ್ಟನ್ ಆಗಿದ್ದೇನೆ. ಹಲವು ವರ್ಷಗಳ ಬಳಿಕ ರಾಹುಲ್ ಸರ್ ತಂಡಕ್ಕೆ ಕೋಚ್ ಆಗಿ ಮರಳಿದ್ದಾರೆ. ಇದು ವಿಭಿನ್ನ ಮತ್ತು ವಿಶೇಷ ಅನುಭವ. ಅವರು ಎಂದೆಂದೂ ರಾಜಸ್ಥಾನ ರಾಯಲ್ಸ್ ಕುಟುಂಬದ ಭಾಗ. ಅವರು ಮರಳಿರುವುದು ನಮಗೆಲ್ಲಾ ಸಂತಸ ತಂದಿದೆ’ ಎಂದರು.
‘ಕ್ರೀಡಾಂಗಣದೊಳಗೆ ಮತ್ತು ಹೊರಗೆ ಅವರು ನಮಗೆಲ್ಲಾ ಮಾದರಿಯಾಗಿ ನಿಲ್ಲುತ್ತಾರೆ. ಹಿರಿಯ ಆಟಗಾರರು ಮತ್ತು ಹೊಸಬರ ಜೊತೆ ಅವರು ಪರಿಣಾಮಕಾರಿಯಾಗಿ ಸಂವಹನ ನಡೆಸುತ್ತಾರೆ’ ಎಂದು ಸಂಜು, ದಿಗ್ಗಜ ಬ್ಯಾಟರ್‌ನ ಗುಣಗಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.