ADVERTISEMENT

ರಣಜಿ ಟ್ರೋಫಿ | ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ಸೌರಾಷ್ಟ್ರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 10:02 IST
Last Updated 13 ಮಾರ್ಚ್ 2020, 10:02 IST
   

ರಾಜ್‌ಕೋಟ್‌: ಆತಿಥೇಯ ಸೌರಾಷ್ಟ್ರ ಮತ್ತು ಬಂಗಾಳ ತಂಡಗಳ ನಡುವೆ ನಡೆದ ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯವು ಡ್ರಾನಲ್ಲಿ ಅಂತಗೊಂಡಿತು. ಅದರೆ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದಸೌರಾಷ್ಟ್ರ, ಇದೇ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಇಲ್ಲಿನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಮೈದಾನದಲ್ಲಿ ಸೋಮವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ, ಮೊದಲ ಇನಿಂಗ್ಸ್‌ನಲ್ಲಿ 425 ರನ್‌ ಗಳಿಸಿ ಆಲೌಟ್‌ ಆಗಿತ್ತು.ಈ ತಂಡದ ಅರ್ಪಿತ್ ವಾಸ್ವಡ (106)ಶತಕ ಹಾಗೂ ಅವಿ ಬರೋಟ್‌ (54), ವಿಶ್ವರಾಜ್ ಜಡೇಜಾ (54) ಮತ್ತು ಚೇತೇಶ್ವರ ಪೂಜಾರ (66) ಅರ್ಧಶತಕಗಳನ್ನು ಬಾರಿಸಿ ನೆರವಾಗಿದ್ದರು.

ಸವಾಲಿನ ಮೊತ್ತದೆದುರು ಇನಿಂಗ್ಸ್‌ ಆರಂಭಿಸಿದ ಬಂಗಾಳ ಉತ್ತಮ ಹೋರಾಟ ನಡೆಸಿತಾದರೂ, ಇನಿಂಗ್ಸ್‌ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.ದಿನದಿಂದ ದಿನಕ್ಕೆ ಸತ್ವ ಕಳೆದುಕೊಳ್ಳುತ್ತಾ ಸಾಗಿದ ಪಿಚ್‌, ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿತು.

ADVERTISEMENT

ಸಂದೀಪ್‌ ಚಟರ್ಜಿ (81), ವೃದ್ಧಿಮಾನ್‌ ಸಾಹ(64) ಮತ್ತು ನಾಕೌಟ್‌ ಪಂದ್ಯಗಳ ಹೀರೋ ಅನುಸ್ತುಪ್‌ ಮಜುಂದಾರ್‌(63), ಅರ್ನಬ್‌ ನಂದಿ (ಅಜೇಯ 40) ಹೋರಾಟ ನಡೆಸಿದರಾದರೂ, ಬಂಗಾಳ 381 ರನ್‌ ಗಳಿಸಲಷ್ಟೇ ಶಕ್ತವಾಯಿತು.

44 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿ ಎರಡನೇ ಇನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರ 4 ವಿಕೆಟ್‌ ನಷ್ಟಕ್ಕೆ 105ರನ್‌ ಗಳಿಸಿತ್ತು. ಈ ವೇಳೆ ಪಂದ್ಯ ಡ್ರಾ ಘೋಷಿಸಲಾಯಿತು. ಹೀಗಾಗಿ ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಸೌರಾಷ್ಟ್ರ ಚಾಂಪಿಯನ್‌ ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.