ಶುಭಮನ್ ಗಿಲ್
(ರಾಯಿಟರ್ಸ್ ಚಿತ್ರ)
ಎಜ್‌ಬಾಸ್ಟನ್: ಭಾರತ ತಂಡದ ನಾಯಕ ಶುಭಮನ್ ಗಿಲ್, ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದ್ದಾರೆ.
ಎಜ್‌ಬಾಸ್ಟನ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ಸ್ಮರಣೀಯ ಸಾಧನೆ ಮಾಡಿದ್ದಾರೆ.
ಭಾರತ ಟೆಸ್ಟ್ ತಂಡದ ನಾಯಕರಾಗಿ ಆಯ್ಕೆಯಾದ ಬಳಿಕ ಎರಡನೇ ಪಂದ್ಯದಲ್ಲೇ ಗಿಲ್ ದ್ವಿಶತಕ ಗಳಿಸಿದ್ದಾರೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್ ಶತಕ ಗಳಿಸಿದ್ದರು.
ಆಂಗ್ಲರ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ 25 ವರ್ಷದ ಗಿಲ್, ಅಮೋಘ ಸಾಧನೆ ಮಾಡಿದ್ದಾರೆ. ಗಿಲ್ 311 ಎಸೆತಗಳಲ್ಲಿ ದ್ವಿಶತಕ ಗಳಿಸಿದ್ದಾರೆ. ಗಿಲ್ ಆಕರ್ಷಕ ಇನಿಂಗ್ಸ್‌ನಲ್ಲಿ 21 ಬೌಂಡರಿ ಹಾಗೂ 2 ಸಿಕ್ಸರ್ ಸೇರಿವೆ.
SENA (ದ.ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ ಶತಕ ಗಳಿಸಿದ ಏಷ್ಯಾ ಮೂಲದ ಮೊದಲ ನಾಯಕ ಎಂಬ ಖ್ಯಾತಿಗೂ ಗಿಲ್ ಭಾಜನರಾಗಿದ್ದಾರೆ.
ಬೃಹತ್ ಮೊತ್ತದತ್ತ ಭಾರತ...
ಗಿಲ್ ಅಮೋಘ ದ್ವಿಶತಕದ ನೆರವಿನೊಂದಿಗೆ ಮೊದಲ ಇನಿಂಗ್ಸ್‌ನಲ್ಲಿ ಭಾರತ ಬೃಹತ್ ಮೊತ್ತದತ್ತ ಮುನ್ನಡೆದಿದೆ. ತಾಜಾ ವರದಿಯ ವೇಳೆಗೆ ಭಾರತ 121.2 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 471 ರನ್ ಗಳಿಸಿದೆ.
ರವೀಂದ್ರ ಜಡೇಜ ಕೇವಲ 11 ರನ್ ಅಂತರದಲ್ಲಿ ಶತಕ ವಂಚಿತರಾದರು. ಜಡೇಜ 137 ಎಸೆತಗಳಲ್ಲಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.