ADVERTISEMENT

ಅರ್ಜೆಂಟೀನಾದಲ್ಲಿ ಶೂಟಿಂಗ್ ವಿಶ್ವಕಪ್‌: ಸಿಫ್ತ್‌ ಕೌರ್‌ಗೆ ರೈಫಲ್ 3ಪಿ ಚಿನ್ನ

ಪಿಟಿಐ
Published 5 ಏಪ್ರಿಲ್ 2025, 14:15 IST
Last Updated 5 ಏಪ್ರಿಲ್ 2025, 14:15 IST
<div class="paragraphs"><p>ಶೂಟಿಂಗ್ ( ಸಾಂದರ್ಭಿಕ ಚಿತ್ರ)</p></div>

ಶೂಟಿಂಗ್ ( ಸಾಂದರ್ಭಿಕ ಚಿತ್ರ)

   

ನವದೆಹಲಿ: ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡ ಭಾರತದ ಶೂಟರ್‌ ಸಿಫ್ತ್ ಕೌರ್‌ ಸಮ್ರಾ ಅವರು ಅರ್ಜೆಂಟೀನಾದ ಬ್ಯೂನೊ ಏರ್ಸ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಕಪ್‌ನಲ್ಲಿ ಮಹಿಳೆಯರ 50 ಮೀಟರ್‌ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯ ಫೈನಲ್ ಗೆದ್ದು ಚಿನ್ನದ ಪಕದ ಗೆದ್ದುಕೊಂಡರು. ಇದು ಹಾಲಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ.

ಈ ಸ್ಪರ್ಧೆಯಲ್ಲಿ ವಿಶ್ವದಾಖಲೆ ಹೊಂದಿರುವ 23 ವರ್ಷ ವಯಸ್ಸಿನ ಸಿಫ್ತ್‌ ಅವರಿಗೆ ವಿಶ್ವಕಪ್‌ನಲ್ಲಿ ಇದು ಮೊದಲ ವೈಯಕ್ತಿಕ ಚಿನ್ನ ಸಹ.

ADVERTISEMENT

ತಿರೊ ಫೆಡರಲ್‌ ಅರ್ಜೆಂಟಿನೊ ಶೂಟಿಂಗ್‌ ರೇಂಜ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್‌ನಲ್ಲಿ 15 ಶಾಟ್‌ಗಳ ನಂತರ (ಮೊಣಕಾಲೂರಿ ಶೂಟ್‌ ಮಾಡುವ ಹಂತದಲ್ಲಿ) ಫರೀದ್‌ಕೋಟ್‌ನ  ಸ್ಪರ್ಧಿ, ಜರ್ಮನಿಯ ಅನಿಟಾ ಮಂಗೋಲ್ಡ್‌ ಅವರಿಗಿಂತ 7.2 ಪಾಯಿಂಟ್ಸ್ ಹಿಂದೆಯಿದ್ದರು. ಆದರೆ ಈ ಹಂತದಲ್ಲಿ ಪ್ರದರ್ಶನ ಮಟ್ಟ ಸುಧಾರಿಸಿಕೊಂಡ ಅವರು ಒಟ್ಟು 45 ಶಾಟ್‌ಗಳ ಫೈನಲ್‌ನಲ್ಲಿ 458.6 ಪಾಯಿಂಟ್ಸ್‌ ಕಲೆಹಾಕಿದರು. ಮಂಗೋಲ್ಡ್‌ 455.3 ಪಾಯಿಂಟ್ಸ್ ಸಂಗ್ರಹಿಸಿ 3.3 ಪಾಯಿಂಟ್‌ ಅಂತರದಿಂದ ಎರಡನೇ ಸ್ಥಾನಕ್ಕೆ ಸರಿದರು.

ಜೂನಿಯರ್ ವಿಶ್ವ ಚಾಂಪಿಯನ್ ಪದಕವಿಜೇತೆ ಅರಿನಾ ಅಲ್ತುಖೋವಾ (ಕಜಕಸ್ತಾನ) 445.9 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಪಡೆದರು.

ಭಾರತ ಈ ಚಿನ್ನದ ಜೊತೆಗೆ ಒಂದು ಕಂಚಿನ ಪದಕ ಗೆದ್ದುಕೊಂಡಿದೆ. ಚೈನ್ ಸಿಂಗ್ ಪುರುಷರ ರೈಫಲ್‌ 3 ಪೊಷಿಷನ್ಸ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಒಂದು ಚಿನ್ನ, ಒಂದು ಬೆಳ್ಳಿ ಗೆದ್ದಿರುವ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಸಿಫ್ತ್‌ ಸಾಧನೆ: ಅರ್ಹತಾ ಸುತ್ತಿನಲ್ಲಿ ಸಿಫ್ತ್‌ ಕೌರ್ ಅವುರ 590 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನದೊಡನೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಹಾಲಿ ಒಲಿಂಪಿಕ್ ಚಾಂಪಿಯನ್ ಚಿಯರಾ ಲಿಯೋನ್‌, ಮಾಜಿ ಒಲಿಂಪಿಕ್ ಚಾಂಪಿಯನ್ ನಿನಾ ಕ್ರಿಸ್ಟೆನ್ (ಇಬ್ಬರೂ ಸ್ವಿಟ್ಜರ್ಲೆಂಡ್‌) ಮೊದಲ ಎಂಟರಲ್ಲಿ ಸ್ಥಾನ ಪಡೆಯಲು ವಿಫಲರಾದರು. ಒಲಿಂಪಿಕ್ ಪಕದ ವಿಜೇತರಾದ ಅಲೆಕ್ಸಾಂಡ್ರಿಯಾ ಲಿ (ಕಜಕಸ್ತಾನ) ಮತ್ತು ಮೇರಿ ಟಕ್ಕರ್ (ಅಮೆರಿಕ) ಅವರೂ ಅರ್ಹತಾ ಸುತ್ತನ್ನು ಮೀರಲಾಗಲಿಲ್ಲ.

ರೈಝಾ ಮುನ್ನಡೆ: ಮಹಿಳೆಯರ ಸ್ಕೀಟ್‌ ವಿಭಾಗದಲ್ಲಿ ನಾಲ್ಕು ಸುತ್ತುಗಳು ಮುಗಿದಿದ್ದು, ಪ್ಯಾರಿಸ್ ಒಲಿಂಪಿಯನ್ ರೈಝಾ ದಿಲ್ಲೋನ್ ಭಾರತದ ಸ್ಪರ್ಧಿಗಳ ಪೈಕಿ ಮುಂಚೂಣಿಯಲ್ಲಿದ್ದಾರೆ. ಅವರು 94 ಪಾಯಿಂಟ್ಸ್‌ ಗಳಿಸಿ ಆರನೇ ಸ್ಥಾನದಲ್ಲಿದ್ದಾರೆ. ಗನೆಮತ್ ಸೆಖೋನ್ (92) 11ನೇ ಸ್ಥಾನದಲ್ಲಿ ಮತ್ತು ದರ್ಶನಾ ರಾಥೋಡ್‌ (89) 18ನೇ ಸ್ಥಾನದಲ್ಲಿದ್ದಾರೆ.

25 ಗುರಿಗಳ ಕೊನೆಯ ಅರ್ಹತಾ ಸುತ್ತು ಬಾಕಿಯಿದೆ. ಆರು ಮಂದಿ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.

ಪುರುಷರ ವಿಭಾಗದಲ್ಲಿ ಭವತೇಗ್ ಗಿಲ್ (94 ಪಾಯಿಂಟ್ಸ್) 18ನೇ ಸ್ಥಾನದಲ್ಲಿದ್ದಾರೆ. ಅನಂತಜೀತ್ ಸಿಂಗ್ ನರೂಕಾ ಮತ್ತು ಗುರುಜೋತ್ ಕಂಗುರಾ ಅವರು ಗಿಲ್ ಅವರಿಗಿಂತ ಹಿಂದೆಯಿದ್ದಾರೆ.

ಪುರುಷರ ಮತ್ತು ಮಹಿಳಾ ವಿಭಾಗದ ಫೈನಲ್‌ ಸ್ಥಳೀಯ ಕಾಲಮಾನ ಶನಿವಾರ ತಡರಾತ್ರಿ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.