ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟರ್ ಬೆನ್ ಡಕೆಟ್ ವಿಕೆಟ್ ಪಡೆದು ಸಂಭ್ರಮಿಸಿದ್ದ ಸಂದರ್ಭದಲ್ಲಿ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ವೇಗಿ ಸಿರಾಜ್‌ಗೆ ದಂಡ ವಿಧಿಸಲಾಗಿದೆ.
ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ, ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಅವರು 12 ರನ್‌ಗಳಿಸಿ ಸಿರಾಜ್ ಎಸೆತದಲ್ಲಿ ಬೂಮ್ರಾಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಪೆವಿಲಿಯನ್ ಕಡೆ ತೆರಳುತ್ತಿದ್ದಾಗ ಮಾಡಿದ ಸನ್ಹೆಯು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ ಎಂದು ಸಿರಾಜ್‌ಗೆ ಪಂದ್ಯದ ಶೇ 15ರಷ್ಟು ಸಂಭಾವನೆ ಹಾಗೂ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಐಸಿಸಿ ನೀತಿ ಸಂಹಿತೆಯ ಪ್ರಕಾರ, ಔಟ್ ಆದ ಬ್ಯಾಟರ್‌ನ ಸಮೀಪದಲ್ಲಿ ಅತಿಯಾದ ಸಂಭ್ರಮಾಚರಣೆ ಮಾಡುವಂತಿಲ್ಲ. ತಾನು ಮಾಡಿರುವ ತಪ್ಪನ್ನು ಸಿರಾಜ್ ಒಪ್ಪಿಕೊಂಡಿರುವುದರಿಂದ, ಮ್ಯಾಚ್ ರೆಫ್ರಿ ರಿಚಿ ರಿಚರ್ಡ್ಸನ್ ಅವರು ದಂಡ ವಿಧಿಸಿದ್ದಾರೆ.
ಕಳೆದ 24 ತಿಂಗಳ ಅವಧಿಯಲ್ಲಿ ಸಿರಾಜ್ ಅವರು ಐಸಿಸಿ ನೀತಿ ಸಂಹಿತೆಯನ್ನು ಎರಡು ಬಾರಿ ಉಲ್ಲಂಘಿಸಿದ್ದಾರೆ. ಆಸ್ಟೇಲಿಯಾ ವಿರುದ್ದ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆಯೂ ಇಂಥದ್ದೇ ಶಿಕ್ಷೆಗೆ ಗುರಿಯಾಗಿದ್ದರು. ನಾಲ್ಕು ಬಾರಿ ಉಲ್ಲಂಘಿಸಿದರೆ ಒಂದು ಅಂತರರಾಷ್ಟೀಯ ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.