ADVERTISEMENT

ಅಭ್ಯಾಸದ ವೇಳೆ ತಲೆಗೆ ಪೆಟ್ಟು ಮಾಡಿಕೊಂಡಿದ್ದ ಸ್ಮಿತ್ 2ನೇ ಏಕದಿನ ಪಂದ್ಯಕ್ಕೆ ಲಭ್ಯ

ಏಜೆನ್ಸೀಸ್
Published 12 ಸೆಪ್ಟೆಂಬರ್ 2020, 12:12 IST
Last Updated 12 ಸೆಪ್ಟೆಂಬರ್ 2020, 12:12 IST
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್
ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್   

ಮ್ಯಾಂಚೆಸ್ಟರ್: ಅಭ್ಯಾಸದ ವೇಳೆ ತಲೆಗೆ ಚೆಂಡು ಬಡಿದ ಕಾರಣ, ಇಂಗ್ಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್, ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಇಂದುಪರೀಕ್ಷೆಗೆ ಒಳಪಟ್ಟಿದ್ದ ಸ್ಮಿತ್‌ ಫಿಟ್‌ ಆಗಿದ್ದು, ಎರಡನೇ ಪಂದ್ಯಕ್ಕೆ ತಂಡದ ಆಯ್ಕೆಗೆ ಲಭ್ಯವಿದ್ದಾರೆ.

ಶುಕ್ರವಾರ ನಡೆದ ಮೊದಲ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಸಿಬ್ಬಂದಿಯೊಬ್ಬರ ಥ್ರೋ–ಡೌನ್‌ ಎದುರಿಸುವ ಸಂದರ್ಭದಲ್ಲಿ ಸ್ಮಿತ್ ಅವರ ತಲೆಗೆ ಚೆಂಡು ಬಡಿದಿತ್ತು. ಹೀಗಾಗಿ ಕೊನೆಯ ಕ್ಷಣದಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿತ್ತು.

ADVERTISEMENT

ಮೊದಲ ಪಂದ್ಯದ ವೇಳೆ ತೊಡೆಯಲ್ಲಿ ನೋವು ಕಾಣಿಸಿಕೊಂಡು ಗಾಯಗೊಂಡಿರುವ ಎಡಗೈ ವೇಗದ ಬೌಲರ್ ಮಿಷೆಲ್ ಸ್ಟಾರ್ಕ್ ಎರಡನೇ ಪಂದ್ಯಕ್ಕೆ ಲಭ್ಯವಿರುವುದು ಅನುಮಾನವಾಗಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಆಸ್ಟ್ರೇಲಿಯಾ ನೀಡಿದ 295 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಒಂಬತ್ತು ವಿಕೆಟ್ ಕಳೆದುಕೊಂಡು 275 ರನ್ ಗಳಿಸಿತು. ಇಂಗ್ಲೆಂಡ್ ಎದುರಿನ ಕಳೆದ 14 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗಳಿಸಿದ ಮೂರನೇ ಜಯ ಇದಾಗಿತ್ತು.

ವೇಗಿ ಜೋಶ್ ಹ್ಯಾಜಲ್‌ವುಡ್ ಮತ್ತು ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ದಾಳಿಗೆ ನಲುಗಿದ ಇಂಗ್ಲೆಂಡ್ 57 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೇಸ್ಟೊ (84; 107 ಎಸೆತ, 4 ಸಿಕ್ಸರ್‌, 4 ಬೌಂಡರಿ) ಅವರ ಅರ್ಧಶತಕ ಮತ್ತು ಆರನೇ ಕ್ರಮಾಂಕದ ಸ್ಯಾಮ್ ಬಿಲಿಂಗ್ಸ್ (118; 110 ಎ, 14 ಬೌಂ, 2 ಸಿ) ಅವರ ಸ್ಫೋಟಕ ಶತಕದ ನೆರವಿನಿಂದ ತಂಡ ಚೇತರಿಸಿಕೊಂಡಿತು. ಕೊನೆಯ ಓವರ್‌ಗಳಲ್ಲಿ ಕೆಚ್ಚೆದೆಯಿಂದ ಹೋರಾಡಿದ ಬಿಲಿಂಗ್ಸ್ ಅವರಿಗೆ ಯಾರಿಂದಲೂ ಉತ್ತಮ ಬೆಂಬಲ ಸಿಗಲಿಲ್ಲ. ಪಂದ್ಯದ ಕೊನೆಯ ಎಸೆತದಲ್ಲಿ ಬಿಲಿಂಗ್ಸ್ ಔಟಾದರು.

ಮ್ಯಾಕ್ಸ್‌ವೆಲ್‌–ಮಾರ್ಶ್ ಶತಕದ ಜೊತೆಯಾಟ
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಾಲ್ಕನೇ ಓವರ್‌ನಲ್ಲಿ ಡೇವಿಡ್ ವಾರ್ನರ್ ಅವರನ್ನು ಕಳೆದುಕೊಂಡಿತು. 43 ರನ್‌ಗಳಿಗೆ ತಂಡದ ಎರಡನೇ ವಿಕೆಟ್ ಉರುಳಿತು. ಮಾರ್ಕಸ್ ಸ್ಟೊಯಿನಿಸ್ ಮತ್ತು ಮಾರ್ನಸ್ ಲಾಬುಶೇನ್ ಅವರ ಪ್ರತಿರೋಧದ ಹೊರತಾಗಿಯೂ123 ರನ್ ಗಳಿಸುವಷ್ಟರಲ್ಲಿ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರನೇ ವಿಕೆಟ್‌ಗೆ 126 ರನ್‌ಗಳ ಜೊತೆಯಾಟ ಆಡಿದ ಮಿಷೆಲ್ ಮಾರ್ಶ್ (73; 100 ಎ, 6 ಬೌಂ) ಗ್ಲೆನ್ ಮ್ಯಾಕ್ಸ್‌ವೆಲ್ (77; 59 ಎ, 4 ಸಿಕ್ಸರ್, 4 ಬೌಂಡರಿ) ತಂಡ ಉತ್ತಮ ಮೊತ್ತ ದಾಖಲಿಸಿತು.

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ:
50 ಓವರ್‌ಗಳಲ್ಲಿ 9ಕ್ಕೆ 294 (ಮಾರ್ಕಸ್ ಸ್ಟೊಯಿನಿಸ್ 43, ಮಾರ್ನಸ್ ಲಾಬುಶೇನ್ 21, ಮಿಷೆಲ್ ಮಾರ್ಶ್ 73, ಗ್ಲೆನ್ ಮ್ಯಾಕ್ಸ್‌ವೆಲ್ 77; ಕ್ರಿಸ್ ವೋಕ್ಸ್ 59ಕ್ಕೆ1, ಜೊಫ್ರಾ ಆರ್ಚರ್ 57ಕ್ಕೆ3, ಮಾರ್ಕ್ ವುಡ್ 54ಕ್ಕೆ3, ಆದಿಲ್ ರಶೀದ್ 55ಕ್ಕೆ2)

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 9ಕ್ಕೆ 257 (ಜಾನಿ ಬೇಸ್ಟೊ 84, ಇಯಾನ್ ಮಾರ್ಗನ್ 23, ಸ್ಯಾಮ್ ಬಿಲಿಂಗ್ಸ್‌ 118; ಜೋಶ್ ಹ್ಯಾಜಲ್‌ವುಡ್ 26ಕ್ಕೆ3, ಪ್ಯಾಟ್ ಕಮಿನ್ಸ್ 74ಕ್ಕೆ1, ಆ್ಯಡಂ ಜಂಪಾ 55ಕ್ಕೆ4, ಮಿಷೆಲ್ ಮಾರ್ಶ್ 29ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾಗೆ 19 ರನ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಎರಡನೇ ಪಂದ್ಯ: ಭಾನುವಾರ
ಆರಂಭ: ಸಂಜೆ 5.30 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.