ADVERTISEMENT

WPL| ಮಹಿಳಾ ಪ್ರೀಮಿಯರ್‌ ಲೀಗ್‌: ಸ್ಮೃತಿ, ದೀಪ್ತಿ, ಜೆಮಿಮಾಗೆ ಜಾಕ್‌ಪಾಟ್‌

ಡಬ್ಲ್ಯುಪಿಎಲ್‌: ವಿದೇಶಿ ಆಟಗಾರ್ತಿಯರಲ್ಲಿ ಗಾರ್ಡನರ್‌, ಸಿವೆರ್‌ಗೆ ಅಧಿಕ ಮೌಲ್ಯ

ಪಿಟಿಐ
Published 14 ಫೆಬ್ರುವರಿ 2023, 1:40 IST
Last Updated 14 ಫೆಬ್ರುವರಿ 2023, 1:40 IST
ದೀಪ್ತಿ ಶರ್ಮಾ
ದೀಪ್ತಿ ಶರ್ಮಾ   

ಮುಂಬೈ : ಚೊಚ್ಚಲ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಬ್ಯಾಟರ್‌ ಸ್ಮೃತಿ ಮಂದಾನ ಅವರಿಗೆ ಜಾಕ್‌ಪಾಟ್‌ ಒಲಿದಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಅವರಿಗೆ ₹ 3.40 ಕೋಟಿ ನೀಡಿ ತನ್ನದಾಗಿಸಿಕೊಂಡಿದೆ. ಮುಂಬೈನಲ್ಲಿ ಸೋಮವಾರ ನಡೆದ ಹರಾಜಿನಲ್ಲಿ ಮಂದಾನ ಅವರನ್ನು ಸೆಳೆದುಕೊಳ್ಳಲು ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಆರ್‌ಸಿಬಿ ಯಶಸ್ವಿಯಾಯಿತು.

ಮಂದಾನ ಅವರಿಗೆ ಹೋಲಿಸಿದರೆ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ನಿರೀಕ್ಷಿತ ಮೌಲ್ಯ ಗಳಿಸಲಿಲ್ಲ. ಮುಂಬೈ ಇಂಡಿಯನ್ಸ್‌ ತಂಡ ₹ 1.80 ಕೋಟಿ ಮೊತ್ತಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಆಲ್‌ರೌಂಡರ್‌ ದೀಪ್ತಿ ಶರ್ಮಾ, ಎರಡನೇ ಅತ್ಯಧಿಕ ಬೆಲೆ ಪಡೆದ ಭಾರತದ ಆಟಗಾರ್ತಿ ಎನಿಸಿಕೊಂಡರು. ಅವರು ₹2.60 ಕೋಟಿ ಮೊತ್ತಕ್ಕೆ ಯು.ಪಿ ವಾರಿಯರ್ಸ್‌ ತಂಡದ ಪಾಲಾದರು.

ಜೆಮಿಮಾ ರಾಡ್ರಿಗಸ್‌ ₹ 2.20 ಕೋಟಿ ಹಾಗೂ ರಿಚಾ ಘೋಷ್‌ ₹ 1.90 ಕೋಟಿ ಮೌಲ್ಯ ಪಡೆದುಕೊಂಡರು. ಇವರಿಬ್ಬರು ಭಾನುವಾರ ನಡೆದಿದ್ದ ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಮಿಂಚಿದ್ದರು. ಇದು ಕೂಡಾ ಅವರ ಮೌಲ್ಯ ಹೆಚ್ಚಲು ಕಾರಣವಾಯಿತು.

ವಿದೇಶಿ ಆಟಗಾರ್ತಿಯರಲ್ಲಿ ಆಸ್ಟ್ರೇಲಿಯಾದ ಆಫ್‌ಸ್ಪಿನ್‌ ಆಲ್‌ರೌಂಡರ್‌ ಆ್ಯಶ್ಲೆ ಗಾರ್ಡನರ್‌ ಮತ್ತು ಇಂಗ್ಲೆಂಡ್‌ನ ನಥಾಲಿ ಸಿವೆರ್‌ ಬ್ರಂಟ್‌ ಅತಿಹೆಚ್ಚು ಬೆಲೆ ಪಡೆದರು. ಅವರು ತಲಾ ₹ 3.20 ಕೋಟಿಗೆ ಗುಜರಾತ್‌ ಜೈಂಟ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳ ಪಾಲಾದರು.

ಭಾರತದ ಯಸ್ಟಿಕಾ ಭಾಟಿಯಾ ಮತ್ತು ವೇಗದ ಬೌಲರ್‌ ರೇಣುಕಾ ಸಿಂಗ್‌ ಅವರು ತಲಾ ₹ 1.50 ಕೋಟಿ ಪಡೆದುಕೊಂಡರೆ, ದೇವಿಕಾ ವೈದ್ಯ ₹ 1.40 ಕೋಟಿ ಮೌಲ್ಯ ಗಳಿಸಿದರು.

ಪೂಜಾ ವಸ್ತ್ರಕರ್‌ ಮತ್ತು ರಿಚಾ ಘೋಷ್‌ ಅವರು ತಲಾ ₹ 1.90 ಕೋಟಿ ಗಿಟ್ಟಿಕೊಂಡು ಅಚ್ಚರಿ ಮೂಡಿಸಿದರು. ಇವರು ಕ್ರಮವಾಗಿ ಮುಂಬೈ ಇಂಡಿಯನ್ಸ್‌ ಮತ್ತು ಆರ್‌ಸಿಬಿ ತಂಡದ ಪಾಲಾದರು.

‌ಮಹಿಳಾ ಕ್ರಿಕೆಟ್‌ನ ಅತ್ಯುತ್ತಮ ನಾಯಕಿಯರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ₹ 1.10 ಕೋಟಿ ನೀಡಿ ಬಿಡ್‌ನಲ್ಲಿ ಜಯಿಸಿತು.

ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಬ್ಯಾಟರ್ ಅಲಿಸಾ ಹೀಲಿ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಮರಿಜನ್ ಕಾಪ್‌, ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್‌ ಅವರೂ ಹೆಚ್ಚಿನ ಮೊತ್ತ ಗಳಿಸಿದರು.

ಪ್ರತಿ ಫ್ರಾಂಚೈಸ್‌ಗಳಿಗೆ ತಲ ₹12 ಕೋಟಿ ಪರ್ಸ್ ಮೌಲ್ಯ ನಿಗದಿಪಡಿಸಲಾಗಿತ್ತು. ಆರ್‌ಸಿಬಿ ತಂಡ ತನ್ನ ಮೊದಲ ನಾಲ್ವರು ಆಟಗಾರ್ತಿಯರಿಗೆ ₹ 7.10 ಕೋಟಿ ಖರ್ಚು ಮಾಡಿತು. ಉಳಿದ ಮೊತ್ತದಿಂದ ಇತರ ಆಟಗಾರ್ತಿಯರನ್ನು ತಂಡಕ್ಕೆ ಸೇರಿಸಿಕೊಂಡಿತು.

ಸ್ಮೃತಿ, ಅಲಿಸಾ ಸೇರಿದಂತೆ 24 ಆಟಗಾರ್ತಿಯರಿಗೆ ತಲಾ ₹ 50 ಲಕ್ಷ ಮೂಲಬೆಲೆ ನಿಗದಿ ಮಾಡಲಾಗಿತ್ತು. ಅದರಲ್ಲಿ ಭಾರತದ 14 ಮತ್ತು ವಿದೇಶದ 10 ಆಟಗಾರ್ತಿಯರಿದ್ದರು.

ಪ್ರತಿ ತಂಡಕ್ಕೆ ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರ್ತಿಯರನ್ನು ಹೊಂದಲು ಅವಕಾಶವಿತ್ತು. ಚೊಚ್ಚಲ ಟೂರ್ನಿ ಮಾರ್ಚ್ 4ರಿಂದ 26ರವರೆಗೆ ಆಯೋಜನೆಯಾಗಿದೆ. ಒಟ್ಟು 22 ಪಂದ್ಯಗಳು ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.