ADVERTISEMENT

ದೇಶಿ ಕ್ರಿಕೆಟ್‌ ಸಾಧಕರ ಕಡೆಗಣನೆ; ಸಾಮಾಜಿಕ ಜಾಲತಾಣದಲ್ಲಿ BCCI ವಿರುದ್ಧ ಆಕ್ರೋಶ

ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ವಿರುದ್ಧ ಆಕ್ರೋಶ

ಗಿರೀಶದೊಡ್ಡಮನಿ
Published 27 ಜನವರಿ 2022, 15:47 IST
Last Updated 27 ಜನವರಿ 2022, 15:47 IST
ರಿಷಿ ಧವನ್ –ಟ್ವಿಟರ್ ಚಿತ್ರ
ರಿಷಿ ಧವನ್ –ಟ್ವಿಟರ್ ಚಿತ್ರ   

ಬೆಂಗಳೂರು: ವೆಸ್ಟ್‌ ಇಂಡೀಸ್ ಎದುರಿನ ಕ್ರಿಕೆಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಬುಧವಾರ ಪ್ರಕಟಿಸಿರುವ ಆತಿಥೇಯ ತಂಡದಲ್ಲಿ ದೇಶಿ ಕ್ರಿಕೆಟ್ ಸಾಧಕರಿಗೆ ಅವಕಾಶ ಕೊಟ್ಟಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದವರಿಗೆ ಮಣೆ ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಅಸಮಾಧಾನ ವ್ಯಕ್ತವಾಗಿದೆ.

ಫೆಬ್ರುವರಿ 6ರಿಂದ ನಡೆಯಲಿರುವ ವಿಂಡೀಸ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಆಡುವ ತಂಡದಲ್ಲಿ ಹಿಮಾಚಲ ಪ್ರದೇಶದ ರಿಷಿ ಧವನ್ ಮತ್ತು ತಮಿಳುನಾಡಿನ ಶಾರೂಖ್ ಖಾನ್ ಅವರಿಗೆ ಅವಕಾಶ ನೀಡುವ ನಿರೀಕ್ಷೆ ಇತ್ತು. ಆದರೆ ಅವರಿಗೆ ಸ್ಥಾನ ದೊರೆತಿಲ್ಲ.

ಆದರೆ, ಐಪಿಎಲ್‌ನಲ್ಲಿ ಮಿಂಚಿದ್ದ ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯಿ ಅವರಿಗೆ ಸ್ಥಾನ ನೀಡಲಾಗಿದೆ.

ADVERTISEMENT

‘ದೀಪಕ್ ಹೂಡಾ ಅವರನ್ನು ಆಯ್ಕೆ ಮಾಡಿದ್ದು ಹೇಗೆ. ಈ ಋತುವಿನಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಮತ್ತು ವಿಕೆಟ್ ಗಳಿಸಿದ ಆಲ್‌ರೌಂಡರ್‌ಗಳಲ್ಲಿ ರಿಷಿ ಧವನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರತ್ತ ಏಕೆ ನೋಡಿಲ್ಲ’ ಎಂದು ನಿಖಿಲ್ ಎಂಬುವವರು ಟ್ವೀಟ್ ಮಾಡದ್ದಾರೆ.

‘ಈ ಮಾದರಿಯಲ್ಲಿ ರಿಷಿ ಧವನ್ ಸ್ಥಾನ ಪಡೆಯಲು ಅರ್ಹರಾಗಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ವಿಜಯ್ ಹಜಾರೆ ಟೂರ್ನಿಗಳಲ್ಲಿ ಅವರು ಅಮೋಘವಾಗಿ ಆಡಿದ್ದರು. ದಿನದಿಂದ ದಿನಕ್ಕೆ ಭಾರತದಲ್ಲಿ ದೇಶಿ ಕ್ರಿಕೆಟ್‌ ಕಡೆಗಣನೆಗೆ ಒಳಗಾಗುತ್ತಿದೆ’ ಎಂದು ಮೊಹಮ್ಮದ್ ಶಹಿದ್ ಮಂಡಲ್ ಟ್ವೀಟ್ ಮಾಡಿದ್ದಾರೆ.

’ರಿಷಿ ಧವನ್ ಅವರಿಂದ ಇನ್ನೂ ಯಾವ ತರಹದ ಪ್ರದರ್ಶನವನ್ನು ನೀವು ನಿರೀಕ್ಷಿಸುತ್ತಿದ್ದೀರಿ. ಇಷ್ಟು ಸಾಕಾಗಲ್ವಾ’ ಎಂದು ನಿತಿನ್ ಭಾರ್ಗವ್ ಪ್ರಶ್ನಿಸಿದ್ದಾರೆ.

31 ವರ್ಷದ ರಿಷಿ ಧವನ್ ಭಾರತ ತಂಡದಲ್ಲಿ 2016ರಲ್ಲಿ ಮೂರು ಏಕದಿನ ಮತ್ತು ಒಂಟು ಟಿ20 ಪಂದ್ಯ ಆಡಿದ್ದರು. ಈ ಬಾರಿ ಹಿಮಾಚಲ ತಂಡವು ವಿಜಯ್ ಹಜಾರೆ ಟ್ರೋಫಿ ಜಯಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಧವನ್ 458 ರನ್ ಮತ್ತು 17 ವಿಕೆಟ್‌ಗಳನ್ನು ಗಳಿಸಿದ್ದರು. ರನ್‌ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಋತುರಾಜ್ (603) ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆದರೆ, ದೇಶಿ ಟಿ20 ಟೂರ್ನಿಯಲ್ಲಿ ತಮಿಳುನಾಡು ಚಾಂಪಿಯನ್ ಆಗಲು ಕಾರಣರಾಗಿದ್ದ ಶಾರೂಕ್ ಖಾನ್ ಕೂಡ ಅವಕಾಶ ಗಿಟ್ಟಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.