ವಿಕೆಟ್ ಪಡೆದ ಸೋನಮ್ ಯಾದವ್ ಅವರನ್ನು ಅಭಿನಂದಿಸಿದ ವಿಕೆಟ್‌ಕೀಪರ್ ಜಿ.ಕಮಲಿನಿ.
ಎಕ್ಸ್ ಚಿತ್ರ
ಕೌಲಾಲಂಪುರ: ಸೋನಮ್ ಯಾದವ್ (6ಕ್ಕೆ 4) ಅವರ ಕೈಚಳಕ ಮತ್ತು ಜಿ.ಕಮಲಿನಿ (ಔಟಾಗದೇ 44;29ಎ) ಅವರ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 19 ವರ್ಷದೊಳಗಿನ ಮಹಿಳೆಯರ ಟಿ20 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿತು.
ಭಾನುವಾರ ನಡೆದ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 67 ರನ್ ಗಳಿಸಿತು. ಆರಂಭಿಕ ಆಟಗಾರ್ತಿ ಕೋಮಲ್ ಖಾನ್ (24) ಹೊರತುಪಡಿಸಿ ಉಳಿದವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಭಾರತದ ಬಲಗೈ ಸ್ಪಿನ್ನರ್ ಸೋನಮ್ ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮೆರೆದರು.
ಗುರಿಯನ್ನು ಬೆನ್ನತ್ತಿದ ಭಾರತ ತಂಡವು ರನ್ ಖಾತೆ ತೆರೆಯುವಷ್ಟರಲ್ಲಿ ಗೊಂಗಡಿ ತ್ರಿಶಾ ಅವರನ್ನು ಕಳೆದುಕೊಂಡಿತು. ನಂತರದಲ್ಲಿ 16 ವರ್ಷ ವಯಸ್ಸಿನ ಕಮಲಿನಿ ಮತ್ತು ಸಾನಿಕಾ ಚಲ್ಕೆ (ಔಟಾಗದೇ 19;17ಎ) ಮುರಿಯದ ಎರಡನೇ ವಿಕೆಟ್‌ಗೆ 68 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಿಕೆಟ್‌ಕೀಪರ್ ಆಗಿರುವ ಕಮಲಿನಿ ಅವರ ಇನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಅಮೋಘ ಸಿಕ್ಸರ್ ಒಳಗೊಂಡಿತ್ತು.
ಭಾರತ ತಂಡವು ಮಂಗಳವಾರ ನೇಪಾಳ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್:
ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 67 (ಕೋಮಲ್ ಖಾನ್ 24; ಸೋನಮ್ ಯಾದವ್ 6ಕ್ಕೆ 4). ಭಾರತ: 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 68 (ಜಿ.ಕಮಲಿನಿ ಔಟಾಗದೇ 44, ಸಾನಿಕಾ ಚಲ್ಕೆ ಔಟಾಗದೇ 19). ಫಲಿತಾಂಶ: ಭಾಋತಕ್ಕೆ 9 ವಿಕೆಟ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.