ಸೋಫಿ ಡಿವೈನ್
ನವಿ ಮುಂಬೈ: ಇಲ್ಲಿನ ಡಿ. ವೈ. ಪಾಟೀಲ್ ಮೈದಾನದಲ್ಲಿ ನಿನ್ನೆ (ಭಾನುವಾರ) ಮುಕ್ತಾಯಗೊಂಡ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಗುಜರಾತ್ 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ ಸೋಫಿ ಡಿವೈನ್ ಸ್ಫೋಟಕ 95 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡದ ಪರವಾಗಿ ಆರಂಭಿಕ ಆಟಗಾರ್ತಿ ಸೋಫಿ ಡಿವೈನ್ ಅವರು, ಕೇವಲ 42 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 95 ರನ್ ಕಲೆಹಾಕಿದರು.
ಒಂದೇ ಒವರ್‌ನಲ್ಲಿ 32 ರನ್
ಡೆಲ್ಲಿ ತಂಡದ ಪರ 6ನೇ ಓವರ್ ಬೌಲಿಂಗ್ ಮಾಡಲು ಬಂದ ಭಾರತ ತಂಡದ ತಾರಾ ಬೌಲರ್ ಸ್ನೇಹ ರಾಣಾ ಅವರ ಪ್ರತೀ ಎಸೆತದಲ್ಲೂ ಬೌಂಡರಿ ಬಾರಿಸುವ ಮೂಲಕ ಒಂದೇ ಓವರ್‌ನಲ್ಲಿ 32 ರನ್ ಸಿಡಿಸಿದರು. ರಾಣಾ ಓವರ್‌ನಲ್ಲಿ ಸೋಫಿ ಅವರು, 4,4,6,6,6,6 ಸಿಡಿಸಿ ಮಿಂಚಿದರು.
ಇದು ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಆಯಿತು. ಒಂದೇ ಓವರ್‌ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಕೀರ್ತಿಗೆ ಡಿವೈನ್ ಪಾತ್ರರಾದರೆ, ಅತ್ತ ಸ್ನೇಹ ರಾಣಾ ಬೇಡದ ದಾಖಲೆಗೆ ಕೊರಳೊಡ್ಡಿದರು.
ಮಹಿಳಾ ಪ್ರೀಮಿಯರ್ ಲೀಗ್ 2ನೇ ಪಂದ್ಯದಲ್ಲಿ ಹ್ಯಾಟ್ರಿಕ್
ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ನಂದನಿ ಶರ್ಮಾ ಅವರು ನಿನ್ನೆ (ಭಾನುವಾರ) ನಡೆದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಕೊನೆಯ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು ಸಾಧನೆ ಮಾಡಿದರು.
ನಂದಿನಿ ಅವರು ತಮ್ಮ ಹಾಗೂ ತಂಡದ ಕೋಟಾದ ಕೊನೆಯ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ, ಕನಿಕಾ ಅಹುಜಾ, ರಾಜೇಶ್ವರಿ ಗಾಯಕವಾಡ್ ಮತ್ತು ರೇಣುಕಾ ಸಿಂಗ್ ಠಾಕೂರ್ ಅವರ ವಿಕೆಟ್ ಪಡೆದುಕೊಂಡರು. ಆ ಮೂಲಕ ಡಬ್ಲ್ಯೂಪಿಎಲ್ ಇತಿಹಾಸದಲ್ಲಿ ಹ್ಯಾಟ್ರಿಕ್ ವಿಕೆಟ್ ತೆಗೆದ 4ನೇ ಬೌಲರ್ ಮತ್ತು ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಇದು ಡಬ್ಲ್ಯೂಪಿಎಲ್‌ನಲ್ಲಿ ನಂದಿನಿ ಅವರ ಎರಡನೇ ಪಂದ್ಯವಾಗಿದೆ.
ಇದಕ್ಕೂ ಮೊದಲು ಭಾರತದ ದೀಪ್ತಿ ಶರ್ಮಾ ಮಾತ್ರ ಭಾರತದ ಪರ ಈ ಸಾಧನೆ ಮಾಡಿದ್ದರು. 24 ವರ್ಷದ ನಂದಿನಿ ಶರ್ಮಾ ಚಂಡೀಗಢ ಮೂಲದವರಾಗಿದ್ದು, ಬಲಗೈ ಮಧ್ಯಮ-ವೇಗದ ಬೌಲರ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.