ADVERTISEMENT

19 ವರ್ಷದೊಳಗಿನವರ ವಿಶ್ವಕಪ್‌ ಉದ್ಘಾಟನಾ ಪಂದ್ಯ: ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 9:40 IST
Last Updated 17 ಜನವರಿ 2020, 9:40 IST
ಇಂಗ್ಲೆಂಡ್‌ ತಂಡದ ಜಾರ್ಜ್‌ ಬಾಲ್ಡರ್ಸನ್‌, ಭಾರತದ ಪ್ರಿಯಂ ಗರ್ಗ್‌, ದಕ್ಷಿಣ ಆಫ್ರಿಕಾದ ಬ್ರೈಸ್‌ ಪಾರ್ಸನ್ಸ್‌ ಮತ್ತು ಅಫ್ಗಾನಿಸ್ತಾನದ ಫರ್ಹಾನ್‌ ಜಾಕೀಲ್‌ ಅವರು ಟ್ರೋಫಿಯೊಂದಿಗೆ –ಐಸಿಸಿ ಚಿತ್ರ
ಇಂಗ್ಲೆಂಡ್‌ ತಂಡದ ಜಾರ್ಜ್‌ ಬಾಲ್ಡರ್ಸನ್‌, ಭಾರತದ ಪ್ರಿಯಂ ಗರ್ಗ್‌, ದಕ್ಷಿಣ ಆಫ್ರಿಕಾದ ಬ್ರೈಸ್‌ ಪಾರ್ಸನ್ಸ್‌ ಮತ್ತು ಅಫ್ಗಾನಿಸ್ತಾನದ ಫರ್ಹಾನ್‌ ಜಾಕೀಲ್‌ ಅವರು ಟ್ರೋಫಿಯೊಂದಿಗೆ –ಐಸಿಸಿ ಚಿತ್ರ   

ಕೇಪ್‌ಟೌನ್‌:19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿರುವಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆಅಫ್ಗಾನಿಸ್ತಾನ ಆಘಾತ ನೀಡಿದೆ.

‘ವಜ್ರಗಳ ನಗರಿ’ ಕಿಂಬರ್ಲಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿಆತಿಥೇಯರಿಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಂಡ್ರೋ ಲೋ (2) ಹಾಗೂ ಜೊನಾಥನ್‌ ಬರ್ಡ್‌ (0) ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು.

ಬಳಿಕ ಬಂದ ನಾಯಕ ಬ್ರೈಸ್‌ ಪಾರ್ಸನ್ಸ್‌ ಹಾಗೂ ಲೂಕ್‌ ಬ್ಯೂಫೋರ್ಟ್‌ ಮೂರನೇ ವಿಕೆಟ್‌ಗೆ 55 ರನ್‌ ಕೂಡಿಸಿದರು. ಬ್ರೈಸ್‌ 42 ಎಸೆತಗಳಲ್ಲಿ 7 ಬೌಂಡರಿ ಸಹಿತ 40 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಬಳಿಕ ಬಂದ ಮಂಜೆ ಲಿವರ್ಟ್‌ ಹಾಗೂ ಜಾಕ್‌ ಲೀಸ್‌ ಸೊನ್ನೆ ಸುತ್ತಿದರು.

ADVERTISEMENT

ಸದ್ಯ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 77ರನ್‌ ಕಲೆ ಹಾಕಿರುವ ಆತಿಥೇಯರು,ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾರೆ. 21 ರನ್‌ ಗಳಿಸಿರುವಲೂಕ್‌ ಮತ್ತು ವಿಕೆಟ್‌ ಕೀಪರ್‌ ಖಾನ್ಯ ಕೊಟನಿ ಕ್ರೀಸ್‌ನಲ್ಲಿದ್ದಾರೆ.

ಅಫ್ಗಾನ್‌ ಪರ ಫಜಲ್‌ ಹಕ್‌ ಮತ್ತು ಶಫಿಕ್‌ವುಲ್ಲಾ ಗಫಾರಿ ತಲಾ ಎರಡು ವಿಕೆಟ್‌ ಪಡೆದಿದ್ದು, ನೂರ್‌ ಅಹ್ಮದ್‌ ಒಂದು ವಿಕೆಟ್‌ ಉರುಳಿಸಿದ್ದಾರೆ.

ಹೊಸ ತಾರೆಗಳ ಉಗಮಕ್ಕೆ ವೇದಿಕೆಯಾಗಿರುವ ಯುವ ವಿಶ್ವಕಪ್‌ನ 13ನೇಆವೃತ್ತಿ ಇದಾಗಿದ್ದು, ದಕ್ಷಿಣ ಆಫ್ರಿಕಾ ಆತಿಥ್ಯ ವಹಿಸಿದೆ. 24 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಈ ಬಾರಿ ಜಪಾನ್‌ ಮತ್ತು ನೈಜೀರಿಯಾ ಪದಾರ್ಪಣೆ ಮಾಡುತ್ತಿವೆ.ಟೂರ್ನಿಯಲ್ಲಿ ಅತಿ ಹೆಚ್ಚು (ನಾಲ್ಕು) ಪ್ರಶಸ್ತಿ ಗೆದ್ದ ಹಿರಿಮೆ ಹೊಂದಿರುವ ಭಾರತ, ಮತ್ತೊಂದು ಕಿರೀಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.

ಯಾರು ಪ್ರಶಸ್ತಿ ಗೆಲ್ಲಬಹುದು
ನಾಲ್ಕು ಬಾರಿಯ ಚಾಂಪಿಯನ್‌ ಭಾರತ, ಈ ಸಲವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳೂ ಪ್ರಶಸ್ತಿಯ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳಲ್ಲಿಯೂ ಭರವಸೆಯ ಆಟಗಾರರಿದ್ದಾರೆ. ಹೀಗಾಗಿ ಈ ತಂಡಗಳನ್ನೂ ಕಡೆಗಣಿಸುವಂತಿಲ್ಲ.

ಪಂದ್ಯ ‘ಟೈ’ ಆದರೆ?
ಲೀಗ್‌ ಹಂತದಲ್ಲಿ ಪಂದ್ಯ ‘ಟೈ’ ಆದರೆ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್‌ ನೀಡಲಾಗುತ್ತದೆ. ನಾಕೌಟ್‌ ಹಂತದ ಹೋರಾಟ ‘ಟೈ’ ಆದರೆ ‘ಸೂಪರ್‌ ಓವರ್‌’ ಆಡಿಸಲಾಗುತ್ತದೆ. ‘ಸೂಪರ್ ಓವರ್‌’ನಲ್ಲೂ ಸಮಬಲ ಕಂಡುಬಂದರೆ ಮತ್ತೆ ‘ಸೂಪರ್‌ ಓವರ್‌’ ಮೊರೆ ಹೋಗಲಾಗುತ್ತದೆ. ಸ್ಪಷ್ಟ ಫಲಿತಾಂಶ ಬರುವವರೆಗೂ ‘ಸೂಪರ್‌ ಓವರ್‌’ ಮುಂದುವರಿಯುತ್ತದೆ.

ಯಾವ ಗುಂಪಿನಲ್ಲಿ ಯಾರು?
ಎ ಗುಂಪು: ಭಾರತ, ಜಪಾನ್‌, ನ್ಯೂಜಿಲೆಂಡ್‌ ಮತ್ತು ಶ್ರೀಲಂಕಾ
ಬಿ ಗುಂಪು: ಆಸ್ಟ್ರೇಲಿಯಾ, ಇಂಗ್ಲೆಂಡ್‌, ನೈಜೀರಿಯಾ ಮತ್ತು ವೆಸ್ಟ್‌ ಇಂಡೀಸ್‌
ಸಿ ಗುಂಪು: ಬಾಂಗ್ಲಾದೇಶ, ಪಾಕಿಸ್ತಾನ, ಸ್ಕಾಟ್ಲೆಂಡ್‌ ಮತ್ತು ಜಿಂಬಾಬ್ವೆ
ಡಿ ಗುಂಪು: ಅಫ್ಗಾನಿಸ್ತಾನ, ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.